ಧಾರವಾಡ ಶಿಕ್ಷಣ ಇಲಾಖೆ ಕಮೀಷನರ್, ಡಿಡಿಪಿಐ ಕಚೇರಿಯಲ್ಲಿ “ಜಾಂಡಾ” ಹೂಡಿರುವವರ ಲಿಸ್ಟ್ ಕೂಡಾ ರೆಡಿ ಮಾಡದ “ವ್ಯವಸ್ಥೆ”…

ಹುಬ್ಬಳ್ಳಿ: ಧಾರವಾಡ ಶಿಕ್ಷಣ ಇಲಾಖೆಯ ಒಂದೇ ಕಛೇರಿಯಲ್ಲಿ 7 ವರ್ಷಕ್ಕಿಂತಲೂ ಹೆಚ್ಚಿಗೆ ಸೇವೆ ಸಲ್ಲಿಸುತ್ತಿರುವ ಕೆಲ ಸಿಬ್ಬಂದಿಯವರ ಅತಿಯಾದ ಭ್ರಷ್ಟಚಾರದ ಬಗ್ಗೆ ಬೇಸತ್ತ ಸಭಾಪತಿಯವರಾದ ಬಸವರಾಜ ಹೊರಟ್ಟಿಯವರು ಅಂತಹವರನ್ನು ಕೂಡಲೇ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಧಾರವಾಡ ಅಪರ ಆಯುಕ್ತರಿಗೆ ಕಳೆದ ವಾರ ಪತ್ರ ಬರೆದು ಸ್ಪಷ್ಟ ಸೂಚನೆ ನೀಡಿದ್ದರು.
ಆದರೆ, ಪತ್ರ ಸಲ್ಲಿಸಿ 10 ದಿನಗಳಾದರೂ ಈವರೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ಯಾರೆ ಎಂದಿಲ್ಲ. ಕನಿಷ್ಠ ಪಕ್ಷ ತಮ್ಮ ಅಧೀನದಲ್ಲಿರುವ ನೌಕರರ ಮಾಹಿತಿಯನ್ನಾದರೂ ಪ್ರಕಟಿಸುವ ಕೆಲಸವನ್ನಾದರೂ ಮಾಡಬೇಕಾಗಿತ್ತು ಎಂಬುದು ಶಿಕ್ಷಣ ಪ್ರೇಮಿಗಳು ಆಕ್ಷೇಪವಾಗಿದೆ.
ಇಲಾಖೆ ಉನ್ನತ ಮೂಲಗಳ ಪ್ರಕಾರ ಒಂದು ವೇಳೆ 7 ವರ್ಷಕ್ಕಿಂತಲೂ ಹೆಚ್ಚಿಗೆ ಸೇವೆ ಸಲ್ಲಿಸಿದ ನೌಕರರನು ವರ್ಗಾಯಿಸಲು ಹೊರಟರೆ ಕಛೇರಿಯ ಬಹುತೇಕ ನೌಕರರನ್ನು ವರ್ಗಾಯಿಸಬೇಕಾಗುತ್ತದೆ ಎನ್ನಲಾಗುತ್ತಿದೆ.
ಅಪರ ಆಯುಕ್ತಾಲಯದಲ್ಲೇ ಕೆಲ ನೌಕರರು 20 ವರ್ಷಗಳಿಂದ ‘ಗೂಟ ಬಡಿದುಕೊಂಡು’ ಕಚೇರಿಯನ್ನೇ ತಮ್ಮ ವೈಯಕ್ತಿಕ ಆಸ್ತಿ ಎಂಬಂತೆ ಠಿಕಾಣೆ ಹೂಡಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಅಪರ ಆಯುಕ್ತಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸದ್ಯ, ಧಾರವಾಡ ಅಪರ ಆಯುಕ್ತಾಲಯ ಕಚೇರಿಯಲ್ಲಿ ೧೦ ಹಾಗೂ ೧೫ ವರ್ಷಗಳಕ್ಕಿಂತಲೂ ಹೆಚ್ಚಿಗೆ ಸೇವೆ ಸಲ್ಲಿಸದ ನೌಕರರ ವಿವರಗಳು ಕರ್ನಾಟಕವಾಯ್ಸ್.ಕಾಂಗೆ ಲಭ್ಯವಾಗಿದ್ದು ಕೂಡಲೇ ಪ್ರಕಟಿಸಲಾಗುವುದು. ಪ್ರಕಟಣೆ ನಂತರವಾದರೂ ಸಭಾಪತಿಯವರ ಪತ್ರವನ್ನು ಗಂಭಿರವಾಗಿ ಪರಿಗಣಿಸಿ ವರ್ಗಾವಣೆಗೆ ಚಾಲನೆಗೆ ಮುಂದಾಗುವರೇ ಎಂದು ಕಾದುನೋಡಬೇಕಾಗಿದೆ.