ಸಭಾಪತಿ ಹೊರಟ್ಟಿಯವರ “ಗಂಭೀರತೆ” ಅರಿಯದ ಧಾರವಾಡ ಶಿಕ್ಷಣ ಇಲಾಖೆಯ ಕಮೀಷನರ್, ಡಿಡಿಪಿಐ….

ಸಭಾಪತಿಯವರ ಸೂಚನೆಗೆ ನಿರ್ಲಕ್ಷ್ಯ; ‘ಡೋಂಟ್ ಕೇರ್’ ಎನ್ನುತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು…
ಧಾರವಾಡ: ಶಾಲಾ ಶಿಕ್ಷಣ ಇಲಾಖೆಯ ಒಂದೇ ಕಛೇರಿಯಲ್ಲಿ 7 ವರ್ಷಕ್ಕಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ತಕ್ಷಣವೇ ಬೇರೆ ಜಿಲ್ಲೆಗೆ ವರ್ಗಾಯಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿಯವರು ಕಳೆದ ವಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಧಾರವಾಡ ಅಪರ ಆಯುಕ್ತರಿಗೆ ಸ್ಪಷ್ಟ ಸೂಚನೆ ನೀಡಿದ್ದರೂ ಇಲ್ಲಿಯವರಗೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಸಭಾಪತಿಯವರ ಪತ್ರಕ್ಕೇ ‘ಡೋಂಟ್ ಕೇರ್’ ಎಂಬ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಅದರಲ್ಲೂ ಕೆಲವರು ಕಳೆದ 10 ವರ್ಷಗಳಿಂದ ಒಂದೇ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಂತಹ ಸಿಬ್ಬಂದಿಯಿಂದ ಭ್ರಷ್ಟಾಚಾರ ಮತ್ತು ಸಾರ್ವಜನಿಕರೊಂದಿಗೆ ದುರಹಂಕಾರ ಪ್ರವೃತ್ತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಭಾಪತಿಗಳು ತೀವ್ರ ಮನನೊಂದು, ಅಸಮಾಧಾನ ವ್ಯಕ್ತಪಡಿಸಿ ಅವರನ್ನು ತಕ್ಷಣವೇ ಬೇರೆ ಜಿಲ್ಲೆಗೆ ವರ್ಗಾಯಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರೂ, ಇಲ್ಲಿಯವರಗೆ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿಸುತ್ತಿರುವುದು ಅನುಮಾನಕ್ಕೆ ಎಡೆಮಾಡಿದೆ.
ವಿಳಂಬದ ಹಿಂದಿನ ನಿಜವಾದ ಕಾರಣವೇನು? ಅಧಿಕಾರಿಗಳು ಭ್ರಷ್ಟರನ್ನು ಕಾಪಾಡುತ್ತಿದ್ದಾರಾ..? ಅಥವಾ ಯಾವುದೇ ಪ್ರಭಾವಶಾಲಿ ವ್ಯಕ್ತಿಯ ಹಸ್ತಕ್ಷೇಪ ಇದರಲ್ಲಿ ಇದೇಯಾ ಎಂಬ ಅನುಮಾನ ಶಿಕ್ಷಣ ಇಲಾಖೆ ಸಿಬ್ಬಂದಿಯಲ್ಲಿ ಕಾಡುತ್ತಿದೆ ಎಂದು ಭಾಸವಾಗುತ್ತಿದೆ.