“ಅಮರಗೋಳ KHB ಕರ್ಮಕಾಂಡ-04”- ಗಬ್ಬೆಬ್ಬಿಸಿ ಗಪ್ಪ್ ಆಗ್ಯಾರ್ ಕೆಎಚ್‌ಬಿ ಅಧಿಕಾರಿಗಳು….

ಹುಬ್ಬಳ್ಳಿ: ಅಮರಗೋಳದ 2ನೇ ಹಂತದ ಕೆಎಚ್ ಬಿ ಬಡಾವಣೆ ನಿರ್ಮಾಣಗೊಂಡು 15 ವರ್ಷ ಕಳೆದರೂ ಇಲ್ಲಿಯವರೆಗೆ ಸಮರ್ಪಕ ಒಳಚರಂಡಿ ಪೈಪಲೈನ್ ಹೊಂದದೆ ಬಡಾವಣೆಯಲ್ಲಿ ಎಲ್ಲೆಂದರಲ್ಲಿ ಒಳಚರಂಡಿಗಳು ಒಡೆದಿದ್ದು ಗಲೀಜ ನೀರು ಮನೆ ಮುಂದೆ ಹರಿದು, ಜನರು ಅನಾರೋಗ್ಯದಿಂದ ಬಳಲುತ್ತಿದ್ದು “ಗಬ್ಬೆಬಿಸಿ ಗಪ್ಪ್ ಆಗ್ಯಾರ್ ಹುಬ್ಬಳ್ಳಿ ಕೆಎಚ್ ಬಿ ಅಧಿಕಾರಗಳು” ಎಂದು ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸುಮಾರು 109 ಎಕರೆಯಲ್ಲಿ ನಿರ್ಮಾಣಗೊಂಡ ಬಡಾವಣೆಯಲ್ಲಿ ಅಂದಾಜು 2000ಕ್ಕೂ ಹೆಚ್ಚಿನ ಮನೆಗಳು ನಿರ್ಮಾಣವಾಗುವ ಸಾಧತೆಗಳಿದ್ದು, ಸದ್ಯ ಬಡಾವಣೆಯಲ್ಲಿ ಸಮರ್ಪಕ ಒಳಚರಂಡಿ ಹಾಗೂ ಕಸ ವಿಲೇವಾರಿ ವ್ಯವಸ್ಥೆ ಮಾಡದ ಕೆಎಚ್‌ಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗೌರವಾನ್ವಿತ ನ್ಯಾಯಾದೀಶರ ಗೃಹವಸತಿಗಳ ಮುಂದೆ ಹಾಗೂ ಕಾಲೋನಿಯ ರಸ್ತೆ ಅಕ್ಕ-ಪಕ್ಕದಲ್ಲಿ ಕೊಳಚೆ ತ್ಯಾಜ್ಯಗಳು ಹರಿದು ಹೋಗುತ್ತಿದ್ದು ಸಾರ್ವಜನಿಕರಿಗೆ, ನೈರ್ಮಲ್ಯ ಹಾಗೂ ಆರೋಗ್ಯ ಸಮಸ್ಯೆಗಳು ಎದುರಾದರೂ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಕಾಲೋನಿ ನಿವಾಸಿ ಅಬ್ದುಲ್ ಅದೋನಿ ಆರೋಪಿಸುತ್ತಾರೆ.
ಕೆಎಚ್‌ಬಿ 2ನೇ ಹಂತದ ಬಡಾವಣೆಯನ್ನು ಶೀಘ್ರವೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಇಲ್ಲವೇ ಮೂಲಭೂತ ಸೌಕರ್ಯಗಳನ್ನ ಒದಗಿಸಿ. ನಿವಾಸಿಗಳಿಗೆ ಇ-ಸ್ವತ್ತು ಒದಗಿಸಬೇಕು ಎಂದು ಮಾಜಿ ನವನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಕಿತ್ತೂರ ಆಗ್ರಹಿಸುತ್ತಿದ್ದು, ಕಾಲೋನಿಯಲ್ಲಿ ಕಸ ವಿಲೇವಾರಿ ಹಾಗೂ ಒಳಚರಂಡಿ ವ್ಯವಸ್ಥೆ ಸೂಕ್ತವಾಗಿ ಇಲ್ಲದರ ಪರಿಣಾಮ ಎಲ್ಲೆಡೆ ಗಬ್ಬು ನಾರುತ್ತಿದ್ದು ಇಲ್ಲಿ ವಾಸಕ್ಕೆ ಅಯೋಗ್ಯವಾದ ವಾತಾವರಣ ಸೃಷ್ಟಿಮಾಡಿರುವ ಅಧಿಕಾರಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ದಾರೆ.
ಕಳೆದ 15 ವರ್ಷಗಳಿಂದ ಬಡಾವಣೆ ನಿರ್ವಹಣೆ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿರುವ ಹುಬ್ಬಳ್ಳಿಯ ಕೇಂದ್ರ ಕಚೇರಿಯ ಹಾಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ತಾವು ಮಾಡಿದ ಅವ್ಯವಹಾರಗಳನ್ನು ಇನ್ನೇನು ಲೋಕಾಯುಕ್ತ ಅಧಿಕಾರಿಗಳು ತನಿಖೆ ಮಾಡುತ್ತಾರೆ ಎಂದು ಹೆದರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಇಂಜಿನಿಯರ್ಸ್, ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಬಸವರಾಜ ಕಿತ್ತೂರ ಆಗ್ರಹಿಸಿದ್ದಾರೆ.