ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿಯೇ ಹಿರಿಯ ದಲಿತ ಅಧಿಕಾರಿಗೆ ಅಪಮಾನ…!!!
ಧಾರವಾಡ: ಡಾ.ಬಿ.ಕೆ.ಎಸ್. ವರ್ಧನ, ನಿರ್ದೇಶಕರು, ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್)ಕರ್ನಾಟಕ, ಧಾರವಾಡ ಇಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಅಪರ ಆಯುಕ್ತರ ಕಚೇರಿಯೂ, ಇದೇ ಡಯಟ್ ಆವರಣ, ಧಾರವಾಡದಲ್ಲಿದೆ. ಕಳೆದ ಹಲವಾರು ವರ್ಷಗಳಿಂದ ಈ ಅಪರ ಆಯುಕ್ತರ ಕಚೇರಿ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿದೆ.
ಈಗ ಅಪರ ಆಯುಕ್ತರ ಕಚೇರಿಯ ನಿರ್ದೇಶಕ ಹುದ್ದೆಯು ಕಳೆದ ಹಲವಾರು ತಿಂಗಳುಗಳಿಂದ ಖಾಲಿಯಿದ್ದು ಹಿರಿಯ ಅಧಿಕಾರಿಯಾದ, ಇದೇ ಆವರಣದಲ್ಲಿರುವ ರಾಜ್ಯ ಮಟ್ಟದ, ಇಲಾಖಾ ಹುದ್ದೆಯ ಸಮಾನ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ.ಬಿ.ಕೆ.ಎಸ್. ವರ್ಧನ, ಇವರ ಸೇವಾ ಜೇಷ್ಟತೆ ಕಡೆಗಣಿಸಿ ಈ ಹುದ್ದೆಯಲ್ಲಿ ಈಶ್ವರ.ಹೆಚ್. ನಾಯ್ಕ ಎಂಬ ಜೂನಿಯರ್ ಅಧಿಕಾರಿಗೆ ನಿರ್ದೇಶನ ಹುದ್ದೆಯ ಪ್ರಭಾರ ವಹಿಸಲಾಗಿದೆ.
ಈಗ ಒಬ್ಬ ಪರಿಶಿಷ್ಟ ಜಾತಿಯ ಹಿರಿಯ ಅಧಿಕಾರಿಗೆ ಅಪರ ಆಯುಕ್ತರು ಆಯುಕ್ತರಾದ ಜಯಶ್ರೀ ಶಿಂತ್ರಿ ಇವರು ಅಪಮಾನ ಮಾಡುವುದರ ಜೊತೆಗೆ ಅವರ ಕಚೇರಿಯ ಸಹ ನಿರ್ದೇಶಕ ಈಶ್ವರ ನಾಯಕ ಅವರು ಈಗ ಸಿಸ್ಲೆಪ್ ನಿರ್ದೇಶಕರಾದ ಡಾ.ವರ್ಧನ ಇವರಿಗೆ ನಿಯಮಬಾಹಿರವಾಗಿ “ಜ್ಞಾಪನ” ಹೊರಡಿಸಿ ಆಡಳಿತ ದುರುಪಯೋಗ ಹಾಗೂ ಇಲಾಖೆಯ ಶಿಷ್ಟಾಚಾರ ಮುರಿದು ಹಾಕಿದ್ದಾರೆ. ಈ ರೀತಿ ಆಡಳಿತಾತ್ಮಕವಾಗಿ ಅನನುಭವಿ ಅಧಿಕಾರಿಯು ಹಿರಿಯ ಅಧಿಕಾರಿಗೆ ಜ್ಞಾಪನ ನೀಡುವುದು ಶಾಲಾ ಶಿಕ್ಷಣ ಇಲಾಖೆಯ ಅವ್ಯವಸ್ಥೆಯನ್ನು ಕಣ್ಣಿಗೆ ರಾಚುವಂತೆ ಎತ್ತಿ ತೋರಿಸುತ್ತದೆ.
ಆಡಳಿತಾತ್ಮಕ ಶಿಸ್ತು ಮೂಡಿಸಲು ಮಾದರಿಯಾಗಬೇಕಾದ ಅಧಿಕಾರಿಯೇ ತನ್ನ ಇಲಾಖೆಯ ಮೇಲಾಧಿಕಾರಿಗೆ ಜ್ಞಾಪನ ನೀಡುವ ಮೂಲಕ ಅಪಮಾನ ಮಾಡುವ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆದರೆ, ಶಾಲಾ ಮುಖ್ಯ ಶಿಕ್ಷಕರು ಡಿಡಿಪಿಐ ಗೆ ಜ್ಞಾಪನ ಪತ್ರ ನೀಡುವ ಪರಿಪಾಟವೂ ಬೆಳೆಯಬಹುದು.
ಬೆಳಗಾವಿ ವಿಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಪರಿಶ್ರಮ ವಹಿಸಬೇಕಾದ ಅಪರ ಆಯುಕ್ತರು ತಮಗೆ ತಿಳಿದಂತೆ ಕಡತ ವಿಲೇವಾರಿ ಮಾಡುವ ಕೆಲಸದಲ್ಲಿ ಇದ್ದು ಪಕ್ಕದ ಕಟ್ಟಡಲ್ಲೇ ಇರುವ ಹಿರಿಯ ನಿರ್ದೇಶಕರಾದ ಡಾ.ವರ್ಧನ ಇವರಿಗೆ ಅಪರ ಆಯುಕ್ತಾಲಯದ ನಿರ್ದೇಶಕ ಹುದ್ದೆಯ ಪ್ರಭಾರ ವಹಿಸಿ ಹಿರಿಯ ಅಧಿಕಾರಿಯಿಂದ ವಿಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಸಹಭಾಗಿತ್ವ ಪಡೆಯಬೇಕೆ ಹೊರತು ಈ ರೀತಿ ಆಡಳಿತಾತ್ಮಕ ಅಶಿಸ್ತಿನಿಂದ ವರ್ತಿಸುವ ಈಶ್ವರ ನಾಯ್ಕ ಅವರಿಗೆ ಶಾಸಕರೊಬ್ಬರ ದೂರದ ಸಂಬಂಧಿ ಎಂಬ ಕಾರಣದಿಂದ ಉನ್ನತ ಹುದ್ದೆಯ ಪ್ರಭಾರ ವಹಿಸಬಾರದು.
ಇದು ಒಬ್ಬ ಪರಿಶಿಷ್ಟ ಅಧಿಕಾರಿಗೆ ಮಾಡಿದ ಅಪಮಾನ, ಅನ್ಯಾಯ ಹಾಗೂ ಅಶಿಸ್ತಿನ ಬೆಳವಣಿಗೆಯಾಗಿದೆ .
ಗೆಳತಿಯರೊಂದಿಗೆ ಹಾರೋಣ ಎಂಬ ಹೊಸ ಕಾರ್ಯಕ್ರಮ ತಂದಿರುವ ಶಾಲಾ ಶಿಕ್ಷಣ ಸಚಿವರು ಅಪರ ಆಯುಕ್ತರ ದುರಾಡಳಿತ, ಸಹ ನಿರ್ದೇಶಕ ಆಡಳಿತ ಇವರ ಅಹಂಕಾರ ಹಾರಾಟ ನಿಲ್ಲಿಸಲು ಮುಂದಾಗುವರೇ?!.
ಈ ಮೊದಲು ಧಾರವಾಡ ಜಿಲ್ಲೆಯು ಶೈಕ್ಷಣಿಕ ಕಾಶಿ ಎಂದು ಪ್ರಸಿದ್ಧವಾಗಿತ್ತು ,ಆದರೆ ಅನನುಭವಿ ಉಪನಿರ್ದೇಶಕರು, ಆಡಳಿತಾತ್ಮಕ ಜ್ಞಾನ ಇಲ್ಲದ ಸಹ ನಿರ್ದೇಶಕರು ,ಆಡಳಿತ, ಸೂಕ್ತ ಮೇಲ್ವಿಚಾರಣಾ ಕುಶಲತೆ ಇಲ್ಲದ ಅಪರ ಆಯುಕ್ತರು ವಿಭಾಗದ ಶಿಕ್ಷಣದ ಅಧೋಗತಿಗೆ ಕಾರಣರಾಗಿದ್ದಾರೆ.
ಹಿರಿಯ ಅಧಿಕಾರಿಗೆ ಜ್ಞಾಪನ ನೀಡಿ ಅಪಮಾನ ಮಾಡಿದ ಸಹ ನಿರ್ದೇಶಕ ಹುದ್ದೆಯಲ್ಲಿರುವ ಈಶ್ವರ ನಾಯ್ಕ ಇವರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಹಾಗೂ ಅವರನ್ನು ನಿರ್ದೇಶಕ ಹುದ್ದೆಯಿಂದ ಬಿಡುಗಡೆಗೊಳಿಸಿ ನಿಯಮಾನುಸಾರ ಹಿರಿಯ ಅಧಿಕಾರಿಗೆ ಪ್ರಭಾರ ವಹಿಸಲು ಮತ್ತು ಈ ಅಶಿಸ್ತಿನ ಆಡಳಿತಕ್ಕೆ ಅವಕಾಶ ನೀಡಿರುವ ಅಪರ ಆಯುಕ್ತರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಶಿಕ್ಷಣ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಅಧಿಕಾರ ವಿಕೇಂದ್ರೀಕರಣ ಕ್ಕೆ ಒತ್ತಾಯಿಸಿದ ಈ ಭಾಗದ ಜನ ಪ್ರತಿಧಿಗಳೂ ಕೂಡ ಈ ವಿಭಾಗೀಯ ಕಚೇರಿಯ ಆಡಳಿತವನ್ನು ಸರಿ ದಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕಾಗಿದೆ.
ಅಸಂಖ್ಯಾತ ಮಕ್ಕಳು ಶಾಲೆ ಬಿಡುತ್ತಿರುವ, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನುಸಾರ ಗುಣಾತ್ಮಕ ಶಿಕ್ಷಣದಿಂದ ವಂಚಿರಾಗುತ್ತಿರುವ ಈ ಸಂದರ್ಭದಲ್ಲಿ ವಿಭಾಗದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಗಮನ ಹರಿಸದಿದ್ದರೆ ಈ ಭಾಗದ ಅಭಿವೃದ್ಧಿ ನೆಲ ಕಚ್ಚುತ್ಟದೆ.