ಸಚಿವ ಪ್ರಲ್ಹಾದ ಜೋಶಿ ‘ಖಡಕ್ ಸೂಚನೆ’- ರೈತರಿಗೆ 10ಲಕ್ಷದ ಸಾಲಕ್ಕೆ “ಸಿಬಿಲ್” ಬೇಡ…!!!
1 min readರೈತರಿಗೆ 10 ಲಕ್ಷ ರೂ. ಸಾಲಕ್ಕೆ ಸಿಬಿಲ್ ಬೇಡ
– ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚನೆ
– ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ರೈತರ ನೆರವಿಗೆ ಬಂದ ಸಚಿವರು
ಹುಬ್ಬಳ್ಳಿ: ರೈತರಿಗೆ 10 ಲಕ್ಷ ರೂ.ವರೆಗೆ ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳು ಯಾವುದೇ ಕಾರಣಕ್ಕೂ ಸಿಬಿಲ್ ಸ್ಕೋರ್ ಪರಿಗಣಿಸಕೂಡದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚನೆ ನೀಡಿದರು.
ಧಾರವಾಡದ ಡಿಸಿ ಕಚೇರಿಯಲ್ಲಿ ಇಂದು ಬ್ಯಾಂಕ್ ಆಫ್ ಬರೋಡಾ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ಹಾಗೂ ಸಲಹಾ ಸಮಿತಿ ಸಭೆ ಉದ್ದೇಶಿಸಿ ಸಚಿವರು ಮಾತನಾಡಿದರು.
ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳ ಬೆಲೆ ಏರಿಕೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ಇಂದು ರೈತರು ಬಹಳ ಸಂಕಷ್ಟದಲ್ಲಿದ್ದಾರೆ ಎಂಬುದನ್ನು ಬ್ಯಾಂಕ್ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ಸಚಿವರು, ಯಾವುದೇ ಕಾರಣಕ್ಕೂ ರೈತರಿಗೆ ಮರು ಸಾಲ ನೀಡುವಲ್ಲಿ ಹಿಂಜರಿಯಬೇಡಿ ಎಂದು ನಿರ್ದೇಶನ ನೀಡಿದರು.
ಸಿಬಿಲ್ ಸ್ಕೋರ್ ಅಗತ್ಯವಿಲ್ಲ: ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಹಾಗಾಗಿ ರೈತರಿಗೆ 10 ಲಕ್ಷ ರೂ.ವರೆಗೂ ಸಾಲ ನೀಡಲು ಯಾವುದೇ ತೊಂದರೆಯಿಲ್ಲ. ಅಲ್ಲದೇ, ಸಿಬಿಲ್ ಸ್ಕೋರ್ ಸಹ ಪರಿಗಣಿಸುವ ಅಗತ್ಯವಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮರು ಸಾಲ ನೀಡಿ: ರೈತ ಸಮುದಾಯಕ್ಕೆ ಬ್ಯಾಂಕ್ ಗಳು ಮರು ಸಾಲ ನೀಡಲು ಕ್ರಮ ಕೈಗೊಳ್ಳಬೇಕು. ಈ ಮೂಲಕ ರೈತರಿಗೆ ನೆರವಾಗಿ ಎಂದು ಎಲ್ಲಾ ಬ್ಯಾಂಕ್ ಗಳ ಅಧಿಕಾರಿಗಳಿಗೆ ಸಲಹೆಯಿತ್ತರು.
ಎಲ್ಲಾ ಬ್ಯಾಂಕ್ ಗಳಿಗೆ ಲಿಖಿತ ಸೂಚನೆ: ತಮ್ಮ ನಿರ್ದೇಶನದಂತೆ ರೈತರಿಗೆ 10 ಲಕ್ಷ ರೂ.ವರೆಗೆ ನೀಡುವ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣಿಸದಂತೆ ಈ ಕೂಡಲೇ ಎಲ್ಲಾ ಬ್ಯಾಂಕ್ ಗಳಿಗೆ ಲಿಖಿತ ಸೂಚನೆ ನೀಡುವುದಾಗಿ ಲೀಡ್ ಬ್ಯಾಂಕ್ ಉನ್ನತ ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಬ್ಯಾಂಕ್ ನ ನಿರ್ವಹಣಾಧಿಕಾರಿ ಪ್ರಭುದೇವ್ ಹಾಗೂ ವಿವಿಧ ಬ್ಯಾಂಕ್ ಗಳ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು.