ಧಾರವಾಡ: 2ಸಾವಿರಕ್ಕಾಗಿ “ಸ್ಪೂರ್ತಿ ಕರಿಯರ್” ರಮೇಶ ಕಾಖಂಡಕಿಗೆ ಚಾಕು ಇರಿತ… ಪ್ರಾಣಾಪಾಯದಿಂದ ಪಾರು…
1 min readಧಾರವಾಡ: ತಮ್ಮ ಪಾಲಕ ನೀಡಿರುವ ಹಣದ ಪೈಕಿ ಎರಡು ಸಾವಿರ ರೂಪಾಯಿ ಕೊಡುವಂತೆ ಕೇಳಿದ ವಿದ್ಯಾರ್ಥಿಗೆ, ಕೊಡಲು ತಡ ಮಾಡಿದ್ದಕ್ಕೆ ಅಕಾಡೆಮಿಯ ಪ್ರಮುಖನಿಗೆ ಚಾಕುವಿನಿಂದ ಇರಿದ ಘಟನೆ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ ಮೂಲದ ಬೀರಪ್ಪ ಎಂಬ ವಿದ್ಯಾರ್ಥಿಯೇ ಚಾಕು ಇರಿದು ಪರಾರಿಯಾಗಿದ್ದು, ಸ್ಪೂರ್ತಿ ಕರಿಯರ್ ಅಕಾಡೆಮಿಯ ರಮೇಶ ಕಾಖಂಡಕಿ ಪ್ರಾಣಾಪಾಯದಿಂದ ಪಾರಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಇನ್ಸಪೆಕ್ಟರ್ ದಯಾನಂದ ಶೇಗುಣಿಸಿ, ಗಾಯಾಳುವಿಗೆ ಚಿಕಿತ್ಸೆ ಕೊಡಿಸಿ, ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಭೀರಪ್ಪ ಎಂಬ ವಿದ್ಯಾರ್ಥಿಯ ಪಾಲಕ ರಮೇಶ ಕಾಖಂಡಕಿ ಅವರಿಗೆ 40 ಸಾವಿರ ರೂಪಾಯಿ ಕೊಟ್ಟಿದ್ದರು. ಆ ಪೈಕಿ ಕೊನೆಯ ಎರಡು ಸಾವಿರ ಕೊಡುವಂತೆ ಇಂದು ಸಂಜೆ ಕೇಳಿದ್ದಾನೆ. ಪೂಜೆ ಮಾಡುತ್ತಿದ್ದ ರಮೇಶ ಅವರು, ನಾಳೆ ಬೆಳಿಗ್ಗೆ ಕೊಡುತ್ತೇನೆ ಎಂದಿದ್ದಾರೆ. ಇದೇ ವಿಷಯ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಆಗ ಭೀರಪ್ಪ ಎರಡು ಬಾರಿ ಚಾಕುವಿನಿಂದ ಇರಿದು ಅಲ್ಲಿಂದ ಎಸ್ಕೇಫ್ ಆಗಿದ್ದಾನೆ.
ಪೊಲೀಸರಿಗೆ ತಲೆನೋವು: ರಾಜ್ಯದ ಮೂಲೆ ಮೂಲೆಯಿಂದ ಬರುವ ವಿದ್ಯಾರ್ಥಿಗಳಿಗೆ ‘ಕರಿಯರ್’ ಭರವಸೆ ಕೊಡುವ ಕೋಚಿಂಗ್ ಸೆಂಟರ್‌ಗಳಲ್ಲಿ ಸಿಸಿಟಿವಿಗಳು ಇರುವುದೇ ಇಲ್ಲ. ಬರುವ ವಿದ್ಯಾರ್ಥಿಗಳ ಮಾಹಿತಿಯೂ ಸರಿಯಾಗಿ ಇಡೋದಿಲ್ಲ. ತಮ್ಮ ಅನುಕೂಲಕ್ಕೆ ತಕ್ಕ ಹಾಗೇ ಪಾಲಕರಿಂದ ಹಣವನ್ನ ಅಕಾಡೆಮಿಯವರು ಮೊದಲು ಪಡೆದು, ವಿದ್ಯಾರ್ಥಿಗಳಿಗೆ ಕೊಡುವುದನ್ನೂ ರೂಢಿಸಿಕೊಂಡಿದ್ದಾರೆ. ಇಂತಹ ಹಲವು ವಿಷಯಗಳು ತಲೆನೋವಾಗಿ ಪರುಣಮಿಸಿವೆ.