ವಿನೋದ “ಸಿಡೀ” ಹೊಡೀತಾರಾ…. ಪ್ರಲ್ಹಾದ ಜೋಶಿ “ಡೊಳ್ಳು” ಬಡೀತಾರಾ- ಏನೇ ಆದ್ರೂ ಇತಿಹಾಸ ನಿರ್ಮಾಣ…!!!
1 min readಧಾರವಾಡ: ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಕ್ಷಣಗಣನೆ ಆರಂಭವಾಗಿದ್ದು, ಅತಿರೇಕದ ಲೆಕ್ಕಾಚಾರಗಳಿಗೆ ನಾಳೆ ಉತ್ತರ ಸಿಗಲಿದೆ. ಈ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಾಣವಾಗಲಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಗೆಲ್ಲುವ ಫೆವರೇಟ್ ಎಂದು ಹೇಳಲಾಗುತ್ತಿದ್ದು, ಈ ಬಾರಿ ಅವರು ಜಯಶಾಲಿಯಾದರೇ, ನಿರಂತರ ಐದು ಬಾರಿ ಗೆದ್ದ ಸಂಸದರೆಂಬ ಇತಿಹಾಸವಾಗಲಿದೆ.
ಪ್ರಲ್ಹಾದ ಜೋಶಿಯವರು ಪ್ರತಿ ಚುನಾವಣೆಯಲ್ಲೂ ಗೆಲುವಿನ ಮತಗಳ ಅಂತರ ಹೆಚ್ಚಿಸಿಕೊಂಡು ಬಂದಿದ್ದು, ಈ ಬಾರಿ ಏನಾಗಬಹುದೆಂಬ ಕೌತುಕ ಹೆಚ್ವಾಗಿದೆ. ಹಾಗಾಗಿಯೇ ಮೊದಲ ಬಾರಿಗೆ ಧಾರವಾಡ ಕ್ಷೇತ್ರದಲ್ಲಿ ಬೆಟ್ಟಿಂಗ್ ಕೂಡಾ ನಡೆದಿದೆ ಎನ್ನಲಾಗಿದೆ.
ಕಿರಿಯ ವಯಸ್ಸಿನ ವಿನೋದ ಅಸೂಟಿ ಅಖಾಡದಲ್ಲಿ ಧುಮಿಕ್ಕಿದ್ದು, ಬಿಜೆಪಿಯಲ್ಲಿ ನಡುಕ ಹುಟ್ಟಿಸಿದ್ದನ್ನ ಅಲ್ಲಗಳೆಯಲು ಆಗಲ್ಲ. ಇಷ್ಟೊಂದು ಪ್ರಮಾಣದಲ್ಲಿ ಪ್ರಚಾರ ನಡೆಯಬಹುದೆಂಬ ಭರವಸೆ ಸ್ವತಃ ಕಾಂಗ್ರೆಸ್ನ ಹಲವರಲ್ಲಿ ಇರಲೇ ಇಲ್ಲ.
ಧಾರವಾಡ ಕ್ಷೇತ್ರದಲ್ಲಿ ಬದಲಾವಣೆ ಆಗತ್ತೆ ಎಂಬ ಮಿಂಚಿದೆ ಹೊರತೂ ಅದು ಕಾಮನಬಿಲ್ಲಾಗಬಹುದೆಂಬ ಭರವಸೆ ಹಲವರಲ್ಲಿ ಉಳಿದಿಲ್ಲ.
ಅದೇನೆ ಇರಲಿ, ಸಣ್ಣ ವಯಸ್ಸಿನ ವಿನೋದ ಅಸೂಟಿ ಸಂಗ್ರಾಣಿ ಕಲ್ಲುಗಳನ್ನ ಸಿಡೀ ಹೊಡೆದ ಹಾಗೇ ಗೆಲುವು ಸಾಧಿಸುತ್ತಾರಾ ಅಥವಾ ಹಿರಿಯ ರಾಜಕಾರಣಿ ಪ್ರಲ್ಹಾದ ಜೋಶಿಯವರು ಗೆಲುವು ಸಾಧಿಸಿ, ಸಂತೋಷದಲ್ಲಿ “ಡೊಳ್ಳು” ಬಡಿಯುತ್ತಾರಾ ಎಂಬುದು ನಾಳೆ ಮಧ್ಯಾಹ್ನದ ವೇಳೆಗೆ ನಿಖರವಾಗಲಿದೆ.