ಶವ ಸಂಸ್ಕಾರಕ್ಕೂ ಹಣವಿಲ್ಲವೆಂದು ನೇಣಿಗೆ ಶರಣಾಗಿದ್ದ ಮಹಿಳೆಯ ಕುಟುಂಬಕ್ಕೆ ಆಸರೆಯಾದ “ಮಂಜುನಾಥ ಹೆಬಸೂರ”…

ಧಾರವಾಡ: ಸ್ವಸಹಾಯ ಸಂಘದ ಸಾಲ ಪಡೆದು ಮರಳಿಸಲಾಗದ ಹಿನ್ನೆಲೆ ಮನನೊಂದು ನೇಣಿಗೆ ಶರಣಾಗಿದ್ದ ಮಹಿಳೆಯ ಅಂತ್ಯಸಂಸ್ಕಾರಕ್ಕೆ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ಅಧ್ಯಕ್ಷ ಮಂಜುನಾಥ ಹೆಬಸೂರ ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಧಾರವಾಡ ರಾಜನಗರದ ಸುಂದರವ್ವ, ನೇಣಿಗೆ ಶರಣಾಗುವ ಮುನ್ನ ಡೆತ್‌ನೋಟಿನಲ್ಲಿ ‘ಶವ ಸಂಸ್ಕಾರಕ್ಕೂ ಹಣವಿಲ್ಲದ ಕಾರಣ, ದೇಹವನ್ನ ಆಸ್ಪತ್ರೆಗೆ ಕೊಡಿ’ ಎಂದು ಬರೆದುಕೊಂಡಿದ್ದರು.
ಈ ವಿಷಯ ಗೊತ್ತಾಗುತ್ತಿದ್ದ ಹಾಗೇ ಜಿಲ್ಲಾಸ್ಪತ್ರೆಗೆ ತೆರಳಿದ ಮಂಜುನಾಥ ಹೆಬಸೂರ ಅವರು, ಅಂತ್ಯಕ್ರಿಯೆ ನಡೆಸಲು ಯಾವುದೇ ತೊಂದರೆಯಾಗದ ರೀತಿಯಲ್ಲಿ ಧನಸಹಾಯ ಮಾಡಿ, ಮುಂದಿನ ದಿನದಲ್ಲಿಯೂ ಸಹಾಯ ಮಾಡುವುದಾಗಿ ಹೇಳಿದ್ದಾರೆಂದು ಗೊತ್ತಾಗಿದೆ.
ಸ್ವಸಹಾಯ ಸಂಘದ ಸಾಲ ಸುಂದರವ್ವ ಅವರ ಆತ್ಮಹತ್ಯೆಗೆ ಕಾರಣವಾಗಿದ್ದು, ಪೊಲೀಸರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.