ಒಂದೇ ಒಂದು “ಶುಗರ್” ಪ್ಯಾಕ್ಟರಿಯಿಲ್ಲದ ಧಾರವಾಡದಲ್ಲಿ ಕುರುಬೂರು ಪ್ರತಿಭಟನೆ: ರೈತರ ಹೆಸರಲ್ಲಿ ರಾಜಕೀಯ…!!
1 min readಧಾರವಾಡ ಜಿಲ್ಲೆಯ ಹಲವು ಸಂಘಟನೆಗಳು ಇಂಥವರ ವಿರುದ್ಧ ಹೋರಾಟ ಮಾಡಲು ಮುಂದಾಗುತ್ತಿದ್ದು, ರೈತರ ಹೆಸರಲ್ಲಿ ರಾಜಕೀಯ ಮಾಡುತ್ತಿರುವವರಿಗೆ ಪಾಠವಾಗಲಿದೆ…
ಧಾರವಾಡ: ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ಒಂದೇ ಒಂದು ಸಕ್ಕರೆ ಕಾರ್ಖಾನೆ ಇಲ್ಲದಿದ್ದರೂ ರೈತರೊಂದಿಗೆ ಹೋರಾಟವನ್ನ ಮಾಡಲು ಮುಂದಾಗಿರುವ ಕುರುಬೂರು ಶಾಂತಕುಮಾರ ಅವರು, ನಿಜವಾಗಿಯೂ ರೈತರಿಗಾಗಿ ಹೋರಾಟ ಮಾಡುತ್ತಿದ್ದಾರಾ ಎಂಬ ಸಂಶಯ ಆರಂಭವಾಗಿದೆ.
ಹೌದು.. ಇದು ನಾಡಿನ ಪ್ರಜ್ಞಾವಂತರು ಅರಿತುಕೊಂಡ ಸತ್ಯವಾಗಿದೆ. ರಾಜ್ಯದಲ್ಲಿ ಈಗಾಗಲೇ 54 ಸಕ್ಕರೆ ಕಾರ್ಖಾನೆಗಳು ತಮ್ಮ ಕಾರ್ಯವನ್ನ ಆರಂಭಿಸಿವೆ. ಇನ್ನುಳಿದ 22 ಕಾರ್ಖಾನೆಗಳು ಸಧ್ಯದಲ್ಲಿ ಕಬ್ಬನ್ನ ನುರಿಸಲು ಆರಂಭ ಮಾಡಲಿವೆ. ಆದರೂ ಹೋರಾಟ ಧಾರವಾಡಕ್ಕೆ ಶಿಫ್ಟ್ ಮಾಡಲು ಕುರುಬೂರು ಮುಂದಾಗಿರುವುದು ಸೋಜಿಗ ಮೂಡಿಸುತ್ತಿದೆ.
ಹಳಿಯಾಳದಲ್ಲಿರುವ ಖಾಸಗಿ ಮಾಲಿಕತ್ವದ ಶುಗರ್ ಪ್ಯಾಕ್ಟರಿ ಕೂಡಾ ಕಾರ್ಯಾರಂಭಿಸಿದೆ. ಈ ಬಗ್ಗೆಯೂ ಮಾಹಿತಿಯಿಲ್ಲದಂತೆ ನಟಿಸುತ್ತಿರುವ ಕುರುಬೂರ ಅವರ ಹೋರಾಟದ ಸ್ವರೂಪವೇ ಜಿಜ್ಞಾಸೆ ಮೂಡಿಸಿದೆ.
ಸರಕಾರದ ಸಮಿತಿಯೊಂದರಲ್ಲಿ ಸ್ವತಃ ತಾವೇ ಸದಸ್ಯರಾಗಿದ್ದು, ಹಲವು ಸಭೆಗಳಲ್ಲಿ ಭಾಗವಹಿಸಿರುವ ಕುರುಬೂರು ಶಾಂತಕುಮಾರ ಅವರು, ಚುನಾವಣೆ ವರ್ಷದಲ್ಲಿ ರಾಜಕೀಯ ಮಾಡೋಕೆ ಆರಂಭಿಸಿದ್ದಾರೆಂಬ ಸಂಶಯ ಆರಂಭವಾಗಿದೆ. ಏಕೆಂದರೆ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಶುಗರ್ ಪ್ಯಾಕ್ಟರಿಯಲ್ಲಿ ರೈತರ ಬಾಕಿ ಹಣ ಇರದಂತೆ ನೋಡಿಕೊಂಡಿದ್ದಾರೆ. ಇಡೀ ದೇಶದಲ್ಲಿ ಮಾದರಿಯಾಗುವ ತೀರ್ಮಾನವನ್ನ ತೆಗೆದುಕೊಂಡು ರೈತರ ಪರವಾಗಿ ನಿಂತಿರುವುದು ಸಮುದಾಯಕ್ಕೆ ಗೊತ್ತಿದೆ.
ದಶಕಗಳಿಂದ ರೈತರ ಬಾಕಿ ಹಣಕ್ಕಾಗಿ ಹೋರಾಟ ಮಾಡುತ್ತಿದ್ದ ಕುರುಬೂರು ಶಾಂತಕುಮಾರ ಅವರು, ಸಧ್ಯದ ಸ್ಥಿತಿಯಲ್ಲಿ ಗೊಂದಲಕ್ಕೆ ಬಿದ್ದಿರುವ ಕಾರಣದಿಂದಲೇ ಸಕ್ಕರೆ ಕಾರ್ಖಾನೆಯಿಲ್ಲದ ಧಾರವಾಡದಲ್ಲಿ ಹೋರಾಟ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ರಾಜ್ಯದ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಇಲಾಖೆಯಿಂದ ರೈತರ ಉನ್ನತಿಗಾಗಿ ತೀರ್ಮಾನ ತೆಗೆದುಕೊಂಡು ಬರುತ್ತಿರುವುದೇ, ಕೆಲವರಿಗೆ ಮುಳುವಾಗಿದೆ. ಅದೇ ಕಾರಣಕ್ಕೆ ಬೇರೆಯದ್ದೆ ರೀತಿಯಲ್ಲಿ ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ.
ಧಾರವಾಡದಲ್ಲಿ ನಡೆಯುತ್ತಿರುವ ಕುರುಬೂರು ಶಾಂತಕುಮಾರ ಅವರ ಪ್ರತಿಭಟನೆಯ ಹಿನ್ನೆಲೆಯನ್ನ ಈ ಭಾಗದ ರೈತಾಪಿ ಜನ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದು, ವ್ಯತಿರಿಕ್ತವಾದ ಹೋರಾಟ ಆರಂಭವಾದರೂ ಅಚ್ಚರಿ ಪಡಬೇಕಿಲ್ಲ.