ನವೀನ ಕುಟುಂಬಕ್ಕೆ ಸಾಂತ್ವನ ಹೇಳಿದ ‘ಎಂಎಲ್ಸಿ’ ಸಲೀಂ ಅಹ್ಮದ- 1ಲಕ್ಷ ರೂ ಚೆಕ್ ವಿತರಣೆ..

ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ ಮೃತಪಟ್ಟ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಸಲೀಂ ಅಹಮ್ಮದ ಭೇಟಿ ನೀಡಿ, ನವೀನ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದೇ ಸಮಯದಲ್ಲಿ ನವೀನ ಕುಟುಂಬಸ್ಥರಿಗೆ ಒಂದು ಲಕ್ಷ ರುಪಾಯಿ ಚೆಕ್ ವಿತರಿಸಿದ ಸಲೀಂ ಅಹ್ಮದ, ನವೀನ ಪಾರ್ಥೀವ ಶರೀರ ತರಬೇಕೆಂಬುದು ನವೀನ ಕುಟುಂಬಸ್ಥರ ಬೇಡಿಕೆ ಆಗಿದೆ. ಆದಷ್ಟು ಬೇಗ ಸರಕಾರ ನವೀನ ಪಾರ್ಥೀವ ಶರೀರ ತರುವ ಕೆಲಸ ಮಾಡಬೇಕು ಎಂದರು.
ನವೀನ ಪಾರ್ಥೀವ ಶರೀರ ತರುವುದರ ಜೊತೆಗೆ ಉಕ್ರೇನ್ ನಲ್ಲಿ ಸಿಲುಕಿರುವ ಎಲ್ಲ ಬಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಬೇಕು. ನವೀನ ಸಾವು ಸಾಕಷ್ಟು ದುಃಖ ತಂದಿದೆ ಎಂದರು.
ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ನವೀನ ಸಾವು ರಾಜ್ಯಕ್ಕೆ ಒಂದು ಸಂದೇಶ ಕೊಟ್ಟಿದೆ. ಶಿಕ್ಷಣ ವ್ಯವಸ್ಥೆ ಬದಲಾವಣೆ ಆಗಬೇಕಿದೆ ಎಂದು ಸಲೀಂ ಅಹ್ಮದ ಹೇಳಿದರು.