ಅಣ್ಣಿಗೇರಿ ಠಾಣೆ ಪೊಲೀಸ್ ಜೀಪ್ ಕದ್ದು ಪರಾರಿಯಾಗಿದ್ದವನ “ಶೋಕಿ” ಏನು ಗೊತ್ತಾ…!?
1 min readಅಣ್ಣಿಗೇರಿ: ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ನಿಲ್ಲಿಸಿದ್ದ ಪೊಲೀಸ್ ಜೀಪ್ ನ್ನ ಕದ್ದು ಪರಾರಿಯಾಗಿದ್ದ ಆರೋಪಿಯ ಶೋಕಿಯನ್ನ ಕೇಳಿದರೇ ಎಲ್ಲರಿಗೂ ಅಚ್ಚರಿಯಾಗುತ್ತದೆ. ಅಂತಹ ಶೋಕಿಯೇನು ಎಂಬುದು ಪೊಲೀಸ್ ವಿಚಾರಣೆಯ ವೇಳೆಯಲ್ಲಿ ಗೊತ್ತಾಗಿದೆ.
ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಪೊಲೀಸ್ ಜೀಪ್ ಕದ್ದು ಪರಾರಿಯಾಗಿದ್ದ ನಾಗಪ್ಪ ಹಡಪದ, ಅಣ್ಣಿಗೇರಿಯ ಅಂಬಿಕಾನಗರದ ನಿವಾಸಿಯಾಗಿದ್ದಾನೆ. ಕದ್ದು ಪರಾರಿಯಾಗಿದ್ದ ಜೀಪ್ ಬ್ಯಾಡಗಿಯ ಬಳಿ ಪತ್ತೆಯೂ ಆಗಿದೆ.
ಜೀಪ್ ನಿಲ್ಲಿಸಿದ ಕೂಗಳತೆ ದೂರದಲ್ಲಿಯೇ ಆರೋಪಿ ನಾಗಪ್ಪನೂ ಸಿಕ್ಕು ಬಿದ್ದಿದ್ದಾನೆ. ನಂತರ ಆತನನ್ನ ವಿಚಾರಣೆ ಮಾಡುತ್ತಿದ್ದ ವೇಳೆಯಲ್ಲಿ ಪೊಲೀಸರೇ ಬೆಚ್ಚಿ ಬೀಳುವಂತಹ ಮಾಹಿತಿಯನ್ನ ನೀಡಿದ್ದಾನೆ.
ನಾಗಪ್ಪ ಹಡಪದನಿಗೆ ಪೊಲೀಸ್ ವಾಹನವನ್ನ ಚಲಾಯಿಸುವುದು ಅಚ್ಚು ಮೆಚ್ಚಂತೆ. ಅಷ್ಟೇ ಅಲ್ಲ, ಅದನ್ನ ಕದ್ದೆ ಚಲಾಯಿಸಬೇಕೆಂಬ ಕನಸು ಕಂಡಿದ್ದನಂತೆ. ಅದಕ್ಕಾಗಿ, ಹಲವು ತಿಂಗಳುಗಳಿಂದ ಹೊಂಚು ಹಾಕಿದ್ದನಂತೆ. ಆಗಾಗ, ಪೊಲೀಸ್ ಠಾಣೆಗೆ ಬಂದು ಹೋಗುತ್ತಿದ್ದನಂತೆ. ಕಳ್ಳತನ ಮಾಡುವ ಸಮಯದಲ್ಲಿ ಪಿಎಸ್ಐ ರಜೆಯಲ್ಲಿರುವುದನ್ನ ಖಾತ್ರಿ ಪಡಿಸಿಕೊಂಡಿದ್ದಾನೆ. ಹೀಗಾಗಿಯೇ, ಆತ ಸಲೀಸಾಗಿ ಬಂದು ಎಲ್ಲರೂ ಮಂಪರಿನಲ್ಲಿದ್ದಾಗ, ಆಸೆಯನ್ನ ಪೂರೈಸಿಕೊಂಡನಂತೆ.
ದಕ್ಷ ಅಧಿಕಾರಿಯಂದೇ ಹೆಸರು ಪಡೆದಿರುವ ಪಿಎಸ್ಐ ಎಲ್.ಕೆ.ಜೂಲಕಟ್ಟಿ ಇದನ್ನ ಕೇಳಿ ಬೆಚ್ಚಿಬಿದ್ದಿದ್ದಾರೆ. ನಾಗಪ್ಪನನ್ನ ಹೆಡಮುರಿಗೆ ಕಟ್ಟಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.