ಹುಬ್ಬಳ್ಳಿ-ಧಾರವಾಡ ಪೊಲೀಸ್ ಕ್ರೀಡಾಕೂಟ: ಈರಣ್ಣ ದೇಸಾಯಿ, ನೀಲಮ್ಮ ಗಲಗಲಿ ಚಾಂಪಿಯನ್ಸ್…!
1 min readವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ತೆರೆ
30 ಲಕ್ಷ ವೆಚ್ಚದಲ್ಲಿ ಹೊಸ ಸಿ.ಆರ್. ಮೈದಾನ ಅಭಿವೃದ್ಧಿ
ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್
ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ 30 ಲಕ್ಷ ರೂಪಾಯಿಗಳನ್ನು ಹುಬ್ಬಳ್ಳಿ ಗೋಕುಲ ರಸ್ತೆಯ ಹೊಸ ಸಿ.ಆರ್. ಮೈದಾನದ ಅಭಿವೃದ್ಧಿ ಕಾಯ್ದಿರಿಸಲಾಗಿದೆ. ಶೀಘ್ರವಾಗಿ ಮೈದಾನ ಅಭಿವೃದ್ಧಿ ಮಾಡಲಾಗುವುದು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಭರವಸೆ ನೀಡಿದರು.
ಗೋಕುಲ ರಸ್ತೆ ಹೊಸ ಸಶಸ್ತ್ರ ಮೀಸಲು ಪಡೆಯ ಕವಾಯತ್ ಮೈದಾನದಲ್ಲಿಂದು ಜರುಗಿದ ವಾರ್ಷಿಕ ಪೊಲೀಸ್ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಮೂರು ದಿನಗಳ ಕಾಲ ಜರುಗಿದ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೂ ಹಾಗೂ ವಿಜೇತರಿಗೆ ಅಭಿನಂದನೆಗಳು. ಪೊಲೀಸರೆಲ್ಲರೂ ಒಂದು ಕುಟುಂಬ ಇದ್ದಂತೆ. ಉತ್ತಮ ಸ್ಪರ್ಧಾ ಮನೋಭಾವ ಇರಬೇಕು. ಜೀವನದಲ್ಲಿ ಎಂತಹುದೇ ಪರಿಸ್ಥಿತಿ ಎದುರಾದರೂ ಹೋರಾಟ ಮಾಡಬೇಕು. ಕ್ರೀಡಾಕೂಟದಲ್ಲಿ ನಿಷ್ಠೆ ಹಾಗೂ ಆಸಕ್ತಿಯಿಂದ ಭಾಗಿವಹಿಸಿದ್ದೀರಿ. ದಿನನಿತ್ಯದ ವೃತ್ತಿಯಲ್ಲಿ ಇದು ನಿಮಗೆ ಸಹಕಾರಿಯಾಗಲಿದೆ. ಕೋವಿಡ್ ಮೂರನೇ ಅಲೆಯ ಮುನ್ಸೂಚನೆ ದೊರೆತಿದೆ. ಸರ್ಕಾರದಿಂದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಕೋವಿಡ್ ನಿಯಮ ಪಾಲನೆ ಮಾಡುವಂತೆ ನೋಡಿಕೊಳ್ಳುವಲ್ಲಿ ಪೊಲೀಸರ ಪಾತ್ರ ಮಹತ್ವವಾದ್ದು ಎಂದರು.
ಪೊಲೀಸ್ ಆಯುಕ್ತ ಲಾಭೂರಾಮ್ ಸ್ಬಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ಕ್ರೀಡಾ ಸ್ಪೂರ್ತಿ ಹಾಗೂ ಉತ್ಸಾಹದಿಂದ ಮೂರು ದಿನಗಳ ಕಾಲ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದೀರಿ. ವಾರ್ಷಿಕ ಕ್ರೀಡಾ ಕೂಟ ಯಶಸ್ವಿಯಾಗಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ವರ್ಷದ 365 ದಿನವು ವ್ಯಾಯಾಮ, ಯೋಗ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಪೊಲೀಸರಿಗೆ ಸಲಹೆ ನೀಡದರು.
ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿಗೆ ಸನ್ಮಾನ ಮಾಡಲಾಯಿತು. ಕ್ರೀಡಾಕೂಟದ ಮುಂದಾಳು ಸಶಸ್ತ್ರ ಮೀಸಲು ಪಡೆಯ ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ ಮರೋಳ ನೇತೃತ್ವದಲ್ಲಿ ವಾರ್ಷಿಕ ಕ್ರೀಡಾಕೂಡದ ಮುಕ್ತಾಯ ಕವಾಯತು ನೆರವೇರಿತು. ಪೊಲೀಸ್ ಧ್ವಜದ ಅವರೋಹಣ ಮಾಡಲಾಯಿತು. ನಂತರ ಮುಖ್ಯ ಅತಿಥಿಗಳಾದ ಆಮ್ಲನ್ ಆದಿತ್ಯ ಬಿಸ್ವಾಸ್, ಪೊಲೀಸ್ ಧ್ವಜವನ್ನು ಆಯುಕ್ತ ಲಾಭುರಾಮ್ ಅವರಿಗೆ ಹಸ್ತಾಂತರಿಸಿದರು. ಉಪ ಪೊಲೀಸ್ ಆಯುಕ್ತರುಗಳಾದ ಸಾಹಿಲ್ ಬಾಗ್ಲಾ, ಎಸ್.ಬಿ.ಬಸರಗಿ, ಸಿ.ಎ.ಆರ್.ಉಪ ಪೊಲೀಸ್ ಆಯುಕ್ತ ಎಸ್.ವಿ.ಯಾದವ್, ಬಿಸ್ವಾಸ್ ಅವರ ಪತ್ನಿ ಮೈತ್ರಿ ಬಿಸ್ವಾಸ್ ಸೇರಿದಂತೆ ಪೊಲೀಸ್ ಆಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ತೆರೆ
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಘಟಕದ ವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಕ್ರೀಡಾ ಕೂಟದ ಜರುಗಿದ ಪ್ರಮುಖ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ಇಂತಿದೆ.
ಪುರುಷರ 100ಮೀ ಓಟದಲ್ಲಿ ಬಸವರಾಜ ಹೆಬ್ಬಳ್ಳಿ, ಈರಣ್ಣ ಎಸ್ ದೇಸಾಯಿ, ಎನ್.ಎಂ.ಲಮಾಣಿ, ಮಹಿಳೆಯರ 100 ಮೀ ಓಟದ ಸ್ಪರ್ಧೆಯಲ್ಲಿ ಲೀಲಮ್ಮ.ಜಿ, ಮಂಜುಳಾ ನರ್ತಿ, ವಿದ್ಯಾ ಭಜಂತ್ರಿ, ಪುರುಷರ 800 ಮೀಟರ್ ಓಟದಲ್ಲಿ ಮಲ್ಲಪ್ಪ ಚತ್ತರಗಿ, ಮಾಲಾತೇಶ್, ಮಲ್ಲಪ್ಪ ಕುಂಬಾರ, ಮಹಿಳೆಯರ 200 ಮೀಟರ್ ಓಟದಲ್ಲಿ ಮಂಜುಳ ನರ್ತಿ, ಶೃತಿ ಅಕ್ಕೊಳ್ಳಿ, ಪವಿತ್ರ ಅಣ್ಣಯ್ಯನವರ್, ಅನುಕ್ರಮವಾಗಿ ಪ್ರಥಮ ದ್ವೀತಿಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದರು. ಕ್ರೀಡಾಕೂಟದ ವೈಯಕ್ತಿಯ ಪುರುಷರ ವೀರಾಗ್ರಣಿಯಾಗಿ ಪ್ರಶಸ್ತಿಯನ್ನು ಈರಣ್ಣ ಎಸ್ ದೇಸಾಯಿ, ಮಹಿಳಾ ವೀರಾಗ್ರಣಿ ಪ್ರಶಸ್ತಿಯನ್ನು ನೀಲಮ್ಮ ಗಲಗಲಿ ಪಡೆದುಕೊಂಡರು. ಕ್ರೀಡಾ ಕೂಟದ ಅತ್ಯುತ್ತಮ ತಂಡವಾಗಿ ಸಶಸ್ತ್ರ ಮೀಸಲು ಪಡೆ ಹೊರಹೊಮ್ಮಿತು.