ವಾಕರಾರಸಾ, ಈಕರಾರಸಾ ನಿಗಮ ನೌಕರರ ವೇತನ ಕೊಡಿ: ಪಿ.ಎಚ್.ನೀರಲಕೇರಿ…!
1 min readಧಾರವಾಡ : ವಾಕರಾರಸಾ ಮತ್ತು ಈಕರಾರಸಾ ನಿಗಮಗಳ ನೌಕರರಿಗೆ ಮೇ ತಿಂಗಳ ಮತ್ತು ಲಾಕ್ ಡೌನ್ ಸಮಯದಲ್ಲಿನ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಾಕರಾರಸಾ ಸಂಸ್ಥೆಯ ನೌಕರರ ಕೂಟದ ಗೌರವ ಅಧ್ಯಕ್ಷ ಪಿ.ಎಚ್.ನೀರಲಕೇರಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿ.ಎಚ್.ನೀರಲಕೇರಿ ಅವರು, ನೌಕರರ ಹಿತದೃಷ್ಟಿಯಿಂದ ಸಂಸ್ಥೆ ಎಂದು ತನ್ನ ಹೊಣೆಗಾರಿಕೆಯನ್ನು ನಿಬಾಯಿಸಬೇಕಿದೆ ಎಂದರು.
ದಿ.7.4.2021 ರಿಂದ ದಿ.22.4.2021 ವರೆಗೆ ರಾಜ್ಯಾದ್ಯಂತ ನೌಕರರ ಮುಷ್ಕರ ನಡೆಯಿತು. ಈ ಸಂದರ್ಭದಲ್ಲಿ ನ್ಯಾಯಾಲಯ ಮಧ್ಯೆ ಪ್ರವೇಶಿಸಿತು. ನ್ಯಾಯಾಲಯದ ಅಭಿಪ್ರಾಯದಂತೆ ಮುಷ್ಕರ ವಾಪಸ್ ಪಡೆಯಲಾಯಿತು.
ಬಳಿಕ ನೌಕರರು ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ಕಾರ್ಯಸ್ಥಳದ ಅಧಿಕಾರಿಗಳು ಕೋವಿಡ್ ಪರೀಕ್ಷೆ ಮತ್ತು ಲಸಿಕೆ ಹಾಕಿಸಿಕೊಂಡು ಬರುವಂತೆ ಮೌಖಿಕವಾಗಿ ಸೂಚಿಸಿದ್ದಾರೆ. ಇದರಿಂದಾಗಿ ನೌಕರರು ಪರೀಕ್ಷೆ ಮಾಡಿಸಿಕೊಂಡು ಕರ್ತವ್ಯಕ್ಕೆ ಹೋಗಲು 2-3 ದಿನ ಕಳೆದಿದೆ. ನಂತರ ಕರ್ತವ್ಯಕ್ಕೆ ತೆರಳುವ ಅಂದರೆ ಎ.24 ಮತ್ತು 25 ರಂದು ಸರಕಾರ ಜನತಾ ಕಫ್ರ್ಯೂ ಜಾರಿಗೊಳಿಸಿತು. ನಂತರ ಸೋಮವಾರ ಕರ್ತವ್ಯಕ್ಕೆ ನೌಕರರು ಹಾಕರಾಗಲು ಹೋದರೂ ಅಧಿಕಾರಿಗಳು ಕರ್ತವ್ಯ ನೀಡದೇ ವಾಪಸ್ಸು ಕಳಿಸಿದ್ದಾರೆ. ದಿ.27.4.2021 ರಿಂದ ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಯಿತು.
ವಾಸ್ತವ ಹೀಗಿದ್ದರೂ ಕೇಂದ್ರ ಕಚೇರಿಯ ಸುತ್ತೋಲೆ ಪ್ರಕಾರ ಕೇವಲ ಶೇ.20 ರಿಂದ ಶೇ.30 ರಷ್ಟು ನೌಕರರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಬಾಕಿ ಎಲ್ಲ ನೌಕರರಿಗೆ ಗೈರು ಹಾಜರಿ ಎಂದು ಪರಿಗಣಿಸುವುದರಿಂದ ಅವರಿಗೆ ವೇತನ ಸಿಗಲಾರದು. ಈ ಹಿನ್ನೆಲೆಯಲ್ಲಿ ದಿ.6.4.2021 ರಂದು ಇದ್ದಂತೆ 7 ದಿನಗಳಿಗೆ ಮೀರಿ ಅನಧಿಕೃತ ದೀರ್ಘಾವಧಿ ಗೈರು ಹಾಜರಿ ಎಂದು ಪರಿಗಣಿಸಿ ಬಾಕಿ ಕರ್ತವ್ಯ ನಿರ್ವಹಿಸಿರುವ ಎಲ್ಲ ನೌಕರರಿಗೆ ಲಾಕ್ ಡೌನ್ ಸಮಯದಲ್ಲಿ ವೇತನ ನೀಡಬೇಕು ಎಂದು ಮನವಿ ಕೂಡ ಸಲ್ಲಿಸಲಾಗಿದೆ.
ಆದರೆ, ನೌಕರರ ಎಪ್ರಿಲ್ ತಿಂಗಳ ವೇತನ ಕೇವಲ 1 ಸಾವಿರದಿಂದ 1500 ರೂಪಾಯಿ ಪಾವತಿಸಲಾಗಿದೆ. ಕೆಲವರಿಗೆ 300, 400 ರೂಪಾಯಿ ಪಾವತಿಸಿದ್ದರೆ, ಹಲವರದ್ದ ಶೂನ್ಯ ವೇತನ ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಿಂದ ನೌಕರರು ತಮ್ಮ ಜೀವನ ನಿರ್ವಹಣೆ ಮಾಡಲು ಅಸಹಾಯಕರಾಗಿ ಪರದಾಡುತ್ತಿದ್ದಾರೆ.
ಇನ್ನೊಂದೆಡೆ ನೌಕರರ ವೇತನಕ್ಕಾಗಿ ಸರಕಾರ 375 ಕೋ.ರೂ. ಅನುದಾನವನ್ನು ಸಂಸ್ಥೆಗೆ ಬಿಡುಗಡೆ ಮಾಡಿದೆ. ಆದರೆ, ಸಂಸ್ಥೆಯ ಅಧಿಕಾರಿಗಳು ಕೆಳ ಹಂತದ ನೌಕರರ ವೇತನವನ್ನು ಸಮರ್ಪಕವಾಗಿ ಪಾವತಿಸದೇ ಪರೋಕ್ಷವಾಗಿ ಶೋಷಣೆ ಮಾಡುತ್ತಿದೆ.
ಈ ಮಧ್ಯೆ ಸಂಸ್ಥೆಯ ನೌಕರರನ್ನು ಕಾನೂನು ಮತ್ತು ಸುವ್ಯವಸ್ಥೆ ಪಾಲಿಸುವ ಪೊಲೀಸ್ ಇಲಾಖೆಯ ಜೊತೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಧಿಕಾರಿಗಳ ನಿರ್ದೇಶನದಂತೆ ಪೊಲೀಸ್ ಸಿಬ್ಬಂದಿಯ ಜೊತೆ ಕರ್ತವ್ಯ ನಿರ್ವಸುತ್ತಿದ್ದಾರೆ. ಆದ್ದರಿಂದ ನೌಕರರ ಎಪ್ರಿಲ್ ಮತ್ತು ಮೇ ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕು.
ಜೊತೆಗೆ ಕೋವಿಡ್ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಕರಾರ ಸಂಸ್ಥೆಯ ವ್ಯಾಪ್ತಿಯಲ್ಲಿ ಸುಮಾರು 40 ಕ್ಕೂ ಹೆಚ್ಚು ನೌಕರರು ಸಾವನ್ನಪ್ಪಿದ್ದಾರೆ. ಆದರೆ, ಸರಕಾರ ಘೋಷಿಸಿದ 30 ಲಕ್ಷ ರೂಪಾಯಿ ಪರಿಹಾರ ಕೂಡ ತಲುಪಿಲ್ಲ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕಾರ್ಯೋನ್ಮುಖರಾಗಿ ನೌಕರರ ಕುಟುಂಬಗಳ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಹೋರಾಟಗಾರರಾದ ಸಿದ್ದಣ್ಣ ಕಂಬಾರ, ಶ್ರೀಶೈಲಗೌಡ ಕಮತರ, ನೌಕರರ ಕೂಟದ ಪಿ.ಎಫ್.ಕೋಲಕಾರ,ಎಚ್.ಎ.ಜಾಗೀರದಾರ, ಬಸವರಾಜ ಕಮ್ಮಾರ, ಸಿ.ಡಿ.ಗುಡಿಮನಿ, ತಿರುಪತಿ ಕೆ., ಚಂದ್ರಣ್ಣ ದಾನಪ್ಪನವರ ಉಪಸ್ಥಿತರಿದ್ದರು.