ಯಡಿಯೂರಪ್ಪ ನಂತರ ಬಿಜೆಪಿಯಲ್ಲಿ ಯಾರೂ ಇಲ್ಲ: ಮಾಜಿ ಸಿಎಂ ಸಿದ್ಧರಾಮಯ್ಯ…!
1 min readಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಹುಬ್ಬಳ್ಳಿಯಲ್ಲಿಂದು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಅತ್ಯಚಾರ ಪ್ರಕರಣದಲ್ಲಿ ರಮೇಶ ಜಾರಕಿಹೊಳಿಯನ್ನ ತಕ್ಷಣ ಬಂಧನ ಮಾಡಬೇಕೆಂದು ಆಗ್ರಹಿಸಿದರು.
ಮಾತನಾಡಿರುವ ವೀಡಿಯೋ ಇಲ್ಲಿದೆ ನೋಡಿ..
ತಮ್ಮ ಕ್ಷೇತ್ರ ಬದಾಮಿಗೆ ಹೋಗುವ ಮುನ್ನ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಅತ್ಯಾಚಾರ ಪ್ರಕರಣದಲ್ಲಿ 164 ಹೇಳಿಕೆ ಕೊಟ್ಟ ಮೇಲೂ ಆರೋಪಿಯನ್ನ ಯಾಕೆ ಬಂಧಿಸಿಲ್ಲ. ಇಡೀ ದೇಶದಲ್ಲಿ ಇಂತಹ ಬೆಳವಣಿಗೆ ಎಲ್ಲಿಯಾದರೂ ನೋಡಲು ಸಾಧ್ಯಾನಾ..? ಎಂದು ಪ್ರಶ್ನಿಸಿದರು.
ಅತ್ಯಾಚಾರ ಆರೋಪಿ ಗೃಹ ಸಚಿವರನ್ನ ನೇರವಾಗಿ ಭೇಟಿಯಾಗ್ತಾರೆ. ಇದರರ್ಥ ಏನೂ..? ಅವರನ್ನು ರಕ್ಷಿಸಲಾಗುತ್ತಿದೆ. ತನಿಖಾಧಿಕಾರಿಯನ್ನ ರಜೆ ಮೇಲೆ ಕಳಿಸಿದ್ದಾರೆ ಇದರ ಅರ್ಥ ಏನು..?. ಅತ್ಯಾಚಾರ ಆರೋಪಿಯನ್ನ ರಕ್ಷಿಸುತ್ತಿರುವ ಬಸವರಾಜ ಬೊಮ್ಮಾಯಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ, ಲೂಟಿ ಹೊಡೆಯುವ ಖಾತೆ ಸಿಗದಿದ್ದಕ್ಕೆ ಸಿಎಂ ಬದಲಾವಣೆಗೆ, ಸಿ.ಪಿ ಯೋಗೇಶ್ವರ್ ಮುಂದಾಗಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ, ಸಿಎಂ ರಾಜಕೀಯ ಕಾರ್ಯದರ್ಶಿ ಹೇಳಿದ್ದಾರೆ. ಸಿಎಂ ಬದಲಾವಣೆ ಮಾಡಿದ್ರೆ ಬಿಜೆಪಿಯಲ್ಲಿ ಮತ್ತೊಬ್ಬ ಸಮರ್ಥರು ಯಾರೂ ಇಲ್ಲ. ಯಾರು ಇದ್ದಾರೆಯೇ.? ಯಾರು ಇಲ್ಲ. ಯಡಿಯೂರಪ್ಪ ನಂತರ ಬಿಜೆಪಿಯಲ್ಲಿ ಯಾರೂ ಇಲ್ಲ. ಅದೇ ಕಾರಣಕ್ಕೆ ಬಿಜೆಪಿಯಲ್ಲಿ ಬೀದಿ ಕಾಳಗ ನಡೆಯುತ್ತಿದೆ ಎಂದರು.
ಯಡಿಯೂರಪ್ಪ ಬಗ್ಗೆ ನನಗೆ ವೈಯಕ್ತಿಕವಾಗಿ ದ್ವೇಷನೂ ಇಲ್ಲ, ಪ್ರೀತಿನೂ ಇಲ್ಲ ಮನುಷ್ಯತ್ವದ ಆದಾರದ ಮೇಲೆ ಪ್ರೀತಿ ಇದೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದರು.