ಸಿಎಂ ಪ್ಯಾಕೇಜ್- ಆಟೋ ಡ್ರೈವರ್ ಗೆ ಪರಿಹಾರ ಸಂಪೂರ್ಣ ವಿವರ ಇಲ್ಲಿದೆ ನೋಡಿ…
1 min readಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಲಾಕ್ಡೌನ್ ಹೇರಲಾಗಿದ್ದು ಇದನ್ನು ಮುಂದುವರಿಸುವ ಚಿಂತನೆಯಲ್ಲಿ ಸರ್ಕಾರವಿದೆ. ಈ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 1250 ಕೋಟಿ ಅಧಿಕ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ಇಂದು ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಹಲವು ವರ್ಗಗಳಿಗೆ ನೆರವು ಘೋಷಿಸಿದರು. ಪ್ಯಾಕೇಜ್ ನಲ್ಲಿ ಪ್ರತಿ ಹೆಕ್ಟೇರ್ ಹೂ ಬೆಳೆ ಹಾನಿ ಗೆ 10 ಸಾವಿರ ನೆರವು ಘೋಷಿಸಿದ್ದು ಇದಕ್ಕಾಗಿ ಸರ್ಕಾರ 12.37 ಕೋಟಿ ಮೀಸಲಿಟ್ಟಿದ್ದು 20 ಸಾವಿರ ರೈತರಿಗೆ ಅನುಕೂಲವಾಗಲಿದೆ. ಹಣ್ಣು ತರಕಾರಿ ನಷ್ಟಕ್ಕೆ ಪ್ರತಿ ಹೆಕ್ಟೇರ್ 10 ಸಾವಿರ ಸಹಾಯ ಧನ ನೀಡಲು ಸರ್ಕಾರ ನಿರ್ಧರಿಸಿದ್ದು ಇದಕ್ಕಾಗಿ 75 ಕೋಟಿ ಮೀಸಲಿಡಲಾಗಿದೆ ಇದರಿಂದ 69 ಸಾವಿರ ರೈತರಿಗೆ ಸಹಾಯವಾಗಲಿದೆ ಎಂದು ಸರ್ಕಾರ ಹೇಳಿದೆ.
ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಲೈಸೆನ್ಸ್ ಹೊಂದಿರುವ ಮತ್ತು ನೋಂದಣಿಯಾಗಿರುವ 2.10 ಲಕ್ಷ ಚಾಲಕರಿಗೆ 3000 ಪರಿಹಾರ ನೀಡುವುದಾಗಿ ಬಿಎಸ್‌ವೈ ಹೇಳಿದ್ದು ಇದಕ್ಕೆ 63 ಕೋಟಿ ಹಣ ವ್ಯಯ ಮಾಡಲಾಗುತ್ತಿದೆ. ಇನ್ನು ಕಂಬಾರರು, ಕುಂಬಾರರು, ಚಮ್ಮಾರರು, ಕ್ಷೌರಿಕರು, ಮಡಿವಾಳರು, ಟೇಲರ್, ಹಮಾಲರು ಸೇರಿ ಅಸಂಘಟಿತ 3.04 ಲಕ್ಷ ಕಾರ್ಮಿಕರಿಗೆ 2000 ಸಹಾಯ ಧನ ನೀಡಲು ತಿರ್ಮಾನಿಸಲಾಗಿದ್ದು ಇದಕ್ಕೆ 60.89 ಕೋಟಿ ಮೀಸಲಿಟ್ಟಿದೆ.
ನೊಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ತಲಾ 3000 ನೀಡಲು ಸರ್ಕಾರ ನಿರ್ಧರಿಸಿದ್ದು ಇದಕ್ಕಾಗಿ 494 ಕೋಟಿ ಹಣ ಬಿಡುಗಡೆ ಮಾಡಲಿದೆ.
ರಾಜ್ಯದಲ್ಲಿರುವ ನೊಂದಾಯಿತ 2.20 ಲಕ್ಷ ರಸ್ತೆ ಬದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ್ ನಿಧಿಯಲ್ಲಿ 2 ಸಾವಿರ ಸಹಾಯಧನ ನೀಡಲಿದ್ದು ಇದರಿಂದ 44 ಕೋಟಿ ಖರ್ಚಾಗಲಿದೆ. 16,095 ಕಲಾವಿದರಿಗೂ 3000 ಸಹಾಯಧನ ನೀಡಲಾಗುತ್ತಿದ್ದು ಇದಕ್ಕಾಗಿ ಸರ್ಕಾರ 4.85 ಕೋಟಿ ಹಣ ಮೀಸಲಿಟ್ಟಿದೆ.
ಮಧ್ಯಮ ದೀರ್ಘಾವಧಿಯ ಸಾಲಗಳು ಜುಲೈವರೆಗೂ ವಿಸ್ತರಣೆ ಮಾಡಲಿದ್ದು ಈ ಅವಧಿಯ ಬಡ್ಡಿಯನ್ನು ಸರ್ಕಾರ ಪಾವತಿ ಮಾಡಲಿದೆ. ಕೊವಿಡ್ ನಿರ್ವಹಣೆಗಾಗಿ ರಾಜ್ಯದಲ್ಲಿರುವ 6000 ಕ್ಕೂ ಅಧಿಕ ಗ್ರಾಮ ಪಂಚಾಯತಿಗಳಿಗೆ 50,000 ಮುಂಗಡ ಹಣ ನೀಡಲು ಸರ್ಕಾರ ಪ್ಲ್ಯಾನ್ ಮಾಡಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ ಯೋಜನೆ ಜೊತೆಗೆ ರಾಜ್ಯ ಸರ್ಕಾರವೂ ಸೇರಿ ಜೂನ್ ವರೆಗೂ ಪ್ರತಿ ತಿಂಗಳು ಹತ್ತು ಕೆಜಿ ಅಕ್ಕಿ ಸೇರಿ ಉಚಿತ ಪಡಿತರ ನೀಡಲು ಸರ್ಕಾರ ತಿರ್ಮಾನಿಸಿದೆ. ಅಲ್ಲದೇ ಇಂದಿರಾ ಕ್ಯಾಂಟಿನ್ ನಲ್ಲಿ ಸರ್ಕಾರ ಉಚಿತ ಊಟ ನೀಡಲಿದೆ.
ಕೊವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತಿದ್ದು ಈವರೆಗೆ 2.6 ಲಕ್ಷ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ ಇದಕ್ಕಾಗಿ 956 ಕೋಟಿ ಖರ್ಚು ಮಾಡಿದ್ದು ಮುಂದಿನ ದಿನಗಳಲ್ಲೂ ಉಚಿತ ಚಿಕಿತ್ಸೆ ಮುಂದುವರಿಯಲಿದೆ ಎಂದು ಬಿಎಸ್‌ವೈ ತಿಳಿಸಿದ್ದಾರೆ.
ಇನ್ನು ವ್ಯಾಕ್ಸಿನ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ಕೋಟಿ ಡೋಸ್ ಖರೀದಿಗೆ ತಿರ್ಮಾನಿಸಿದ್ದು, ಶಿಕ್ಷಕರು, ಗ್ಯಾಸ್ ಸಿಲಿಂಡರ್ ಹಂಚಿಕೆದಾರರು ಮತ್ತು ಲೈನ್ ಮ್ಯಾನ್ ಗಳನ್ನು ಕೊರೊನಾ ಮುಂಚೂಣಿ ಹೋರಾಟಗಾರರು ಎಂದು ಪರಿಗಣಿಸಿ ಆದ್ಯತೆಯಲ್ಲಿ ವ್ಯಾಕ್ಸಿನ್ ನೀಡಲು ತಿರ್ಮಾನಿಸಿದೆ.