ಮದುವೆಯಾದ ಒಂದೇ ದಿನದಲ್ಲಿ ಮದುಮಗ ಸಾವು…!
ಕಲಘಟಗಿ: ಮದುವೆಯಾದ ಒಂದೇ ದಿನದಲ್ಲಿ ಮದುಮಗ ಸಾವಿಗೀಡಾದ ಘಟನೆ ತಾಲೂಕಿನ ತಬಕದ ಹೊನ್ನಳ್ಳಿ ಗ್ರಾಮದಲ್ಲಿ ನಡೆದಿದ್ದು, ಇಡೀ ಗ್ರಾಮವೇ ನೀರವಮೌನದಲ್ಲಿ ಮುಳುಗಿದೆ.
ಗ್ರಾಮದ ಶಶಿಕುಮಾರ ಪಟ್ಟಣಶೆಟ್ಟಿ (ಅರಿಷಣಗೇರಿ) ಎಂಬ ಯುವಕನೇ ಮದುವೆಯಾದ 18ಗಂಟೆಯಲ್ಲೇ ಸಾವಿಗೀಡಾಗಿದ್ದಾನೆ. ನಿನ್ನೆಯಷ್ಟೇ ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ.
ಕಲಘಟಗಿಯಲ್ಲಿ ಕೆಲಸ ಮಾಡುತ್ತಿದ್ದ ಶಶಿಕುಮಾರ ಲಾಕ್ ಡೌನ್ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದು ತಂಗಿದ್ದ. ಇತ್ತೀಚೆಗೆ ಮದುವೆ ಫಿಕ್ಸ್ ಆಗಿದ್ದರಿಂದ, ಅನಿವಾರ್ಯವಾಗಿ ಕೆಲವೇ ಜನರ ಸಮ್ಮುಖದಲ್ಲಿ ಮದುವೆಯ ಆರತಕ್ಷತೆಯೂ ನಡೆದಿತ್ತು.
ಮದುವೆ ಮುಗಿದ ಮೇಲೆ ಮಾವನ ಮನೆ ಶಿಗ್ಗಾಂವ ತಾಲೂಕಿನ ಮೂಗಬಸರಿಕಟ್ಟಿಗೆ ಹೋಗಿದ್ದ ಶಶಿಕುಮಾರಗೆ ರಾತ್ರಿ ಸಡನ್ನಾಗಿ ಅನಾರೋಗ್ಯವಾಗಿದೆ. ತಕ್ಷಣವೇ ಹುಬ್ಬಳ್ಳಿಯ ಆಸ್ಪತ್ರೆಗೆ ಕರೆದುಕೊಂಡು ಬಂದರೂ, ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆ ನಿಖರವಾದ ಕಾರಣವೇನು ಎಂದು ತಿಳಿದು ಬಂದಿಲ್ಲವಾದರೂ, ಕೆಲವರು ಇದು ಕೋವಿಡ್ ನ ಪರಿಣಾಮ ಎಂದು ಹೇಳಲಾಗುತ್ತಿದೆ.