ಮೀರತ್: ಜನರ ನಡುವೆ ಶೂಟರ್ ದಾದಿ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಶೂಟರ್ ಚಂದ್ರೋ ತೋಮರ್ ಕೊರೋನಾ ಸೋಂಕಿನಿಂದ ಮೃತರಾಗಿದ್ದಾರೆ. ಇವರಿಗೆ 89 ವರ್ಷ ವಯಸ್ಸಾಗಿತ್ತು. ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಈ ವಾರದ ಆರಂಭದಲ್ಲಿ ಮೀರತ್‌ನ ಆಸ್ಪತ್ರೆಗೆ ಚಂದ್ರೋ ತೋಮರ್ ಅವರನ್ನು ದಾಖಲು ಮಾಡಲಾಗಿತ್ತು.ಶೂಟರ್ ಚಂದ್ರೋ ತೋಮರ್ ನಿಧನಕ್ಕೆ ಕೇಂದ್ರ ಮಂತ್ರಿಗಳಿಂದ ಹಿಡಿದು ಚಲನಚಿತ್ರ ನಟರವರೆಗಿನ ವಿವಿಧ ವರ್ಗದ ಜನರು ಸಂತಾಪ ಸೂಚಿಸಿದ್ದಾರೆ.
ಮೊದಲ ಬಾರಿಗೆ ಬಂದೂಕನ್ನು ಹಿಡಿದಾಗ ಚಂದ್ರೊ ಅವರಿಗೆ 60 ಕ್ಕಿಂತ ಹೆಚ್ಚು ವಯಸ್ಸಾಗಿತ್ತು. ಆದರೆ ಅನೇಕ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಚಂದ್ರೋ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಅಲ್ಲದೆ , ಬಾಲಿವುಡ್ ಚಲನಚಿತ್ರ ಒಂದಕ್ಕೆ ಸಹ ಸ್ಫೂರ್ತಿಯಾಗಿದ್ದರು. ಅವರು ವಿಶ್ವದ ಅತ್ಯಂತ ಹಿರಿಯ ಮಹಿಳಾ ಶಾರ್ಪ್ ಶೂಟರ್ ಎಂದು ಹೇಳಲಾಗಿತ್ತು.
ಭಾರತದ ರಾಷ್ಟ್ರಪತಿಗಳು ಸ್ವತಃ ನೀಡಿದ್ದ ಸ್ತ್ರೀ ಶಕ್ತಿ ಸನ್ಮಾನ್ ಸೇರಿದಂತೆ ಹಿರಿಯ ನಾಗರಿಕ ವಿಭಾಗದಲ್ಲಿ ಶೂಟರ್ ದಾದಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕುಟುಂಬದಲ್ಲಿ ಕಿರಿಯ ಸದಸ್ಯರೊಬ್ಬರು ತಮ್ಮ ಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಶೂಟಿಂಗ್ ರೇಂಜ್ ನಲ್ಲಿ ತಮ್ಮನ್ನು ದಾಖಲಿಸಲು ಕೇಳಿದ ನಂತರ ಅವರು ಅಚ್ಚರಿ ಎಂಬಂತೆ ರೈಫಲ್ ಅನ್ನು ಕೈಗೆತ್ತಿಕೊಂಡಿದ್ದರು.