ಜೋಶಿಯವರ ಮನೆ ಮುಂದೆ ವಿಷ ಸೇವಿಸಿದ ಮಹಿಳೆಯ ಸ್ಥಿತಿ ಗಂಭೀರ…!
1 min readಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಮನೆ ಮುಂದೆ ವಿಷ ಸೇವಿಸಿದ್ದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿರುವ ಮಹಿಳೆ ಬದುಕುಳಿವುದು ಕಷ್ಟಸಾಧ್ಯವೆಂದು ಹೇಳಲಾಗುತ್ತಿದೆ.
ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀದೇವಿ ವೀರಣ್ಣ ಕಮ್ಮಾರ ಎಂಬ ಮಹಿಳೆ ಕಳೆದ ಆರು ತಿಂಗಳ ಹಿಂದಿನಿಂದಲೂ, ತನ್ನ ಮನೆಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಿಸಿ ಎಂದು ಬೇಡಿಕೊಂಡು, ಶಾಸಕ ಅಮೃತ ದೇಸಾಯಿ ಹಾಗೂ ಮಂತ್ರಿಗಳು ಆಗಿರುವ ಧಾರವಾಡ ಜಿಲ್ಲೆಯ ಸಂಸದ ಪ್ರಲ್ಹಾದ ಜೋಶಿಯವರ ಮನೆಗೆ ಅಲೆದಾಡಿದ್ದರು. ಆದರೆ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಿನ್ನೆ ಅವರ ಮನೆ ಬಳಿಯ ವಿಷ ಸೇವಿಸಿದ್ದರು.
ತೀವ್ರವಾಗಿ ಅಸ್ವಸ್ಥಗೊಂಡ ಮಹಿಳೆಯನ್ನ ಹುಬ್ಬಳ್ಳಿಯ ಕಿಮ್ಸನ ತುರ್ತು ಚಿಕಿತ್ಸಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ವಿಷ ಸೇವಿಸಿ 18 ಗಂಟೆಗಳಾದರೂ, ಯಾವುದೇ ರೀತಿಯ ಚೇತರಿಕೆ ಕಂಡು ಬಂದಿಲ್ಲ. ವಿಷ ದೇಹದಲ್ಲಿ ಹರಡಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತಿ ವೀರಣ್ಣ ಕಮ್ಮಾರ, ಬೆಂಗಳೂರು ಬಿಟ್ಟು ಬಂದ ನಂತರ ಗರಗದಲ್ಲಿದ್ದಾಗಲೇ ಲಕ್ವಾ(ಪ್ಯಾರಾಲೈಸಸ್) ಹೊಡೆದಿದೆ. ಇದರಿಂದ ಮನೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಗಂಡನಿಗೆ ವಿಕಲಚೇತನ ಯೋಜನೆಯಡಿ ಕಳೆದ ಐದಾರೂ ತಿಂಗಳಿಂದ 1400 ನೂರು ಪ್ರತಿ ತಿಂಗಳು ಬರುತ್ತಿದೆ. ಆದರೆ, ಬಿದ್ದ ಮನೆಯನ್ನ ಸಂಪೂರ್ಣವಾಗಿ ಮುಗಿಸಿಕೊಳ್ಳಲು ಆಗದ ಸ್ಥಿತಿ ಮಹಿಳೆಗೆ ಬಂದಿದೆ.
ಈ ಎಲ್ಲ ಬಡತನದ ಸ್ಥಿತಿಯನ್ನ ಹೇಳಿಕೊಂಡರೂ ತನಗೆ ನ್ಯಾಯ ಸಿಗಲಿಲ್ಲವೆಂದು ಬೇಸರಗೊಂಡು ಶ್ರೀದೇವಿ ಪತ್ರವೊಂದನ್ನ ಬರೆದಿಟ್ಟು ವಿಷ ಸೇವಿಸಿದ್ದಳು. ಪತಿ ವೀರಣ್ಣನಿಗೆ ಲಕ್ವಾ ಹೊಡೆದಿದ್ದರಿಂದ, ಸರಿಯಾಗಿ ಮಾತನಾಡಲು ಕೂಡಾ ಬರುವುದಿಲ್ಲ. ತಾಯಿ ಆಸ್ಪತ್ರೆಯಲ್ಲಿದ್ದರೇ, ಇದ್ದ ಇಬ್ಬರು ಮಕ್ಕಳು, ಅನಾಥ ಭಾವದಿಂದ ಕಿಮ್ಸನ ಅಂಗಳದಲ್ಲಿ ತಿರುಗುತ್ತಿದ್ದಾರೆ.