ಕ.ರಾ.ಪ್ರಾ.ಶಾ ಶಿಕ್ಷಕರ ಸಂಘದಲ್ಲಿ ಮಹಿಳೆಯರಿಗೆ ಪ್ರಾಧ್ಯಾನ್ಯತೆ-ಶಂಬುಲಿಂಗನಗೌಡ ಪಾಟೀಲ್
1 min readಹುಬ್ಬಳ್ಳಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಲಾಗಿದೆ. ಶಿಕ್ಷಕರ ವರ್ಗಾವಣೆ ಹಾಗೂ ಪದವೀಧರರ ಶಿಕ್ಷಕರ ಬೇಡಿಕೆಗಳನ್ನು ಸಮಚಿತ್ತದಿಂದ ಆಲೋಚಿಸಿ ಸರ್ಕಾರದ ಮುಂದಿರಿಸಿ ಈಡೇರಿಸಲು ಸಂಘದಿಂದ ಪ್ರಯತ್ನಿಸಲಾಗುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಂಬುಲಿಂಗನಗೌಡ ಪಾಟೀಲ್ ಹೇಳಿದರು.
ನಗರದ ಆರ್. ಎನ್ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ ಶಹರ ಘಟಕದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ 2020 ಕಾರ್ಯಾಗಾರದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಅನೇಕ ಸಂಘ ಸಂಸ್ಥೆಗಳಿವೆ. ಅದರಲ್ಲೂ ಮಹಿಳಾ ಸಂಸ್ಥೆಗಳು ಮಹಿಳೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಆದಿಮಾನವ ಕಾಲದಿಂದಲೂ ಸ್ತ್ರೀಯು ಗಟ್ಟಿಯಾಗಿದ್ದಾಳೆ. ವಿವಿಧ ಬಗೆಯ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಪುರುಷ ಉದ್ದಾರವಾಗಬೇಕಾದರೆ ಮಹಿಳೆಯ ಪಾತ್ರ ದೊಡ್ಡದು. ಹಾಗೆಯೇ ಅವಳು ವಿದ್ಯಾವಂತೆಯಾಗಲು ಮನೆಯ ಪುರುಷನ ಬೆಂಬಲವು ಅವಶ್ಯವಿರುತ್ತದೆ. ಹೆಣ್ಣು ಗಂಡು ಎನ್ನದೇ ಎಲ್ಲರನ್ನೂ ಗೌರವಿಸುವುದರಿಂದ ಸಮಾನತೆ, ಸಮಪಾಲು, ಸಮಬಾಳ್ವೆ ಕಾಣಬಹುದು. ಇಲ್ಲವಾದರೆ ಮನೆಯು ಅಶಾಂತಿಯನ್ನು ಕಾಣಬೇಕಾಗುತ್ತದೆ. ವಾಟ್ಸಪ್ ಗ್ರೂಪ್ ನಲ್ಲಿ ಹರಿದಾಡುವ ಸುದ್ದಿಗಳಿಗೆ ಕಿವಿಕೊಡದೆ ನಿಯಮಗಳ ಅಡಿಯಲ್ಲಿ ಶಿಕ್ಷಕರು ಸೇವೆ ಮಾಡಬೇಕು. ಸರ್ಕಾರಿ ನೌಕರರಿಗೆ ಒಂದು ಕಟ್ಟಳೆಯಿದ್ದು, ಬೇಡಿಕೆಗಳನ್ನು ಈಡೇರಿಸುವುದಕ್ಕೆ ಸಂಘ ಸಂಸ್ಥೆಗಳಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಭವಿಷ್ಯಾ ಮಾರ್ಟಿನ್, ಕೊರೊನಾ ಸಮಯದಲ್ಲಿ ವೈದ್ಯರು ಮತ್ತು ನರ್ಸ್ ಅವರಿಗಿಂತಲೂ ಹೆಚ್ಚು ಸೇವೆಯನ್ನು ಶಿಕ್ಷಕರು ಸಲ್ಲಿಸಿದ್ದಾರೆ. ಆನ್ ಲೈನ್ ಮೂಲಕ ಹಾಗೂ ಮನೆ ಮನೆಗೆ ಹೋಗಿ ಮಕ್ಕಳಿಗೆ ಪಾಠ ಮಾಡಿದ್ದಾರೆ.
ಕಂಪ್ಯೂಟರ್ ನಲ್ಲಿ ಪಾಠ ಮಾಡುವುದೇ ಬೇರೆ, ಮನೆಗೆ ಹೋಗಿ ಪಾಠ ಮಾಡುವುದೇ ಬೇರೆ, ಇದು ಸುಲಭದ ಮಾತಲ್ಲ. ಪೊಲೀಸ್, ಖಜಾನೆ ಹೀಗೆ ಎಲ್ಲಾ ಇಲಾಖೆಗಳಲ್ಲಿಯೂ ಮಹಿಳೆಯರು ವಯಸ್ಸಿನ ಮಿತಿಯಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು. ಉದಾಹರಣೆಗೆ ಸುಧಾ ಮೂರ್ತಿ ಅವರು ಸಾಹಿತ್ಯ ಹಾಗೂ ಪುಸ್ತಕಗಳನ್ನು ಬರೆಯುತ್ತಾರೆ. ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಅವರು ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಮೊದಲ ಮಹಿಳಾ ಇಂಜಿನಿಯರ್ ಪದವೀಧರ ಆಗಿದ್ದಾರೆ ಎಂದರು.
ಎ.ಐ.ಪಿ.ಟಿ.ಎಫ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಶಿಕ್ಷಕರ ಬೇಕು ಬೇಡಿಕೆ ಮತ್ತು ಅವರ ಸಬಲೀಕರಣಕ್ಕಾಗಿ ಸಂಘ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಸರ್ಕಾರಿ ಮಾರ್ಗದರ್ಶನದಲ್ಲಿ ಬೇಡಿಗಳನ್ನು ಈಡೇರಿಸಲಾಗುವುದು ಎಂದು ನುಡಿದರು.
ಕ.ರಾ.ಪ್ರಾ. ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ , ಪೊಲೀಸ್ ಇನ್ಸಪೆಕ್ಟರ್ ಮಹಾದೇವಿ ಮಂಜುನಾಥ ಮಾತನಾಡಿದರು. ಶಿಕ್ಷಕರು ನಾಡಗೀತೆ ಹಾಡಿದರು. ಬಾಲಕಿ ಕಾವೇರಿ ಕರಿಗಾರ ಕನ್ನಡ ಹಾಡು ಪ್ರಸ್ತುತ ಪಡಿಸಿದ್ದಕ್ಕಾಗಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹಿಳೆಯರಿಗೆ ಸನ್ಮಾನಿಸಲಾಯಿತು.
ಕ.ರಾ.ಪ್ರಾ.ಶಾಲಾ ಸಂಘದ ರಾಜ್ಯ ಉಪಾಧ್ಯಕ್ಷ ವಾಯ್.ಎಚ್. ಬಣವಿ, ಶಹರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಹು-ಧಾ ಶಿಶು ಯೋಜನಾಭಿವೃದ್ಧಿ ಅಧಿಕಾರಿ ಕಮಲವ್ವ ಬೈಲೂರು, ಕ.ರಾ.ಸ.ನೌ.ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಶಹರ ವಲಯ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಶಿವಳ್ಳಿಮಠ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀಧರ ಪತ್ತಾರ, ಸಾ.ಶಿ.ಇಲಾಖೆ ವಿಷಯ ಪರಿವೀಕ್ಷಕಿ ಪೂರ್ಣಿಮಾ ಮುಕ್ಕುಂದ, ಕ.ರಾ.ಪ್ರಾ. ಶಾಲಾ ಶಿಕ್ಷಕರ ಸಂಘ ಜಿಲ್ಲಾ ಅಧ್ಯಕ್ಷ ವ್ಹಿ.ಎಫ್. ಚುಳಕಿ, ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಶಹರ ಕ.ರಾ.ಸ.ನೌ.ಘಟಕದ ಅಧ್ಯಕ್ಷ ಪ್ರಲ್ಹಾದ್ ಕೆ.ಗೆಜ್ಜಿ, ಶಹರ ಕ.ರಾ.ಪ್ರಾ.ಶಾಲಾ ಸಂಘದ ಅಧ್ಯಕ್ಷ ಮಂಜುನಾಥ ಜಂಗಳಿ, ಪ್ರೇಮಾ ಆರಟ್ಟಿ, ಎಂ.ಯು. ಶಿರಟ್ಟಿ, ಶಹರ ಕೆ.ಎಸ್ .ಪಿ.ಎಸ್.ಟಿ.ಎ ಮಾಜಿ ಅಧ್ಯಕ್ಷ ಪಿ.ಎಮ್. ಕಟ್ಟಿಮನಿ,ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುನಿತಾ ಕುಲಕರ್ಣಿ ಪ್ರಾರ್ಥಿಸಿ, ಮಂಜುನಾಥ ಜಂಗಲಿ ಸ್ವಾಗತಿಸಿ, ತೇಜಸ್ವಿನಿ ರೇವಡಿಗಾರ ವಂದಿಸಿದರು.