ಆಕಳು-ಎಮ್ಮೆ ಕಳ್ಳತನ- ಸುರೇಶ ಪಾಟೀಲ, ಗಣೇಶ ನಾಯಕ ಬಂಧನ…!

ಬೆಳಗಾವಿ: ಗ್ರಾಮೀಣ ಪ್ರದೇಶಗಳಲ್ಲಿ ದನಕರುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ 10 ದನಕರುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಹಂಗರಗಾ ಗ್ರಾಮದ 32 ವರ್ಷದ ಸುರೇಶ ಪಾಟೀಲ, 27 ವರ್ಷದ ಗಣೇಶ ನಾಯಕ ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಬೆಳಗಾವಿ ಗ್ರಾಮೀಣ ಪ್ರದೇಶಗಳಲ್ಲಿ ಆಕಳು, ಎಮ್ಮೆಗಳನ್ನು ಕಳ್ಳತನ ಮಾಡಿ ಫಾರ್ಮ್‍ಹೌಸ್‍ನಲ್ಲಿ ಇರಿಸಿ ಹಾಲು ಮತ್ತು ಉತ್ಪಾದನೆಗಳಿಂದ ಲಾಭ ಗಳಿಸುತ್ತಿದ್ದರು ಎಂದು ಪ್ರಾಥಮಿಕ ವಿಚಾರಣೆ ವೇಳೆ ಬಯಲಾಗಿದೆ.
ಈ ಕುರಿತು ಡಿಸಿಪಿ ಡಾ.ವಿಕ್ರಮ ಆಮ್ಟೆ ಮಾತನಾಡಿ, ದನಕರುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿರುವ ಬೆಳಗಾವಿ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಸುನೀಲಕುಮಾರ್ ನೇತೃತ್ವದ ತಂಡ ಒಟ್ಟು 5 ಜಾನುವಾರು ಕಳ್ಳತನ ಪ್ರಕರಣಗಳನ್ನು ಭೇದಿಸಿದೆ. ವಶಪಡಿಸಿಕೊಂಡಿರುವ 10 ದನಕರುಗಳಲ್ಲಿ 5 ಆಕಳು, 5 ಎಮ್ಮೆ ಇದ್ದು, ಇದರಲ್ಲಿ 2 ಗೀರ್ ತಳಿಯ ಆಕಳು, 3 ಮುರ್ರಾ ತಳಿಯ ಎಮ್ಮೆಗಳು ಸೇರಿವೆ. ಬಂಧಿತರಿಂದ ದನಕರುಗಳು, ಸಾಗಾಟ ವಾಹನ ಸೇರಿ ಒಟ್ಟು 9 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನು ಬಂಧಿತರ ಪೈಕಿ ಆರೋಪಿ ಸುರೇಶ ಪಾಟೀಲ ಡೈರಿ ಡಿಪ್ಲೋಮಾ ಶಿಕ್ಷಣ ಪಡೆದಿದ್ದು, ಹೈನುಗಾರಿಕೆಯಲ್ಲೇ ಶಿಕ್ಷಣ ಪಡೆದಿರುವುದು ವಿಶೇಷ ಎಂದು ತಿಳಿಸಿದರು. ಒಟ್ಟಿನಲ್ಲಿ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ದನಕರುಗಳ ಕಳ್ಳರ ಗ್ಯಾಂಗ್ ಜಾಲಾಡಿರುವುದು ಗ್ರಾಮೀಣ ಜನತೆಯಲ್ಲಿ ಹರ್ಷ ಮೂಡಿಸಿದೆ.