ಹುಬ್ಬಳ್ಳಿಯಲ್ಲಿ ಸಿಕ್ಕ ಶವ ಮೈಸೂರು ಅರಸರ ಮನೆತನದವರದ್ದಂತೆ…!!!!
1 min readಹುಬ್ಬಳ್ಳಿ: ನಗರದಲ್ಲಿ ತೀವ್ರ ಕುತೂಹಲಕಾರಿಯಾದ ಘಟನೆಯೊಂದು ಬೆಳಕಿಗೆ ಬಂದಿದೆ. ಅರಸು ರಾಜಮನೆತನದ ಕುಡಿಯೊಂದು ಹುಬ್ಬಳ್ಳಿಯಲ್ಲಿ ಅನಾಥ ಶವವಾಗಿ ಪತ್ತೆಯಾಗಿ, ನಂತರ ಕುಟುಂಬದವರ ಸಮ್ಮುಖದಲ್ಲಿ ಅಂತ್ಯಸಂಸ್ಕಾರವಾದ ಪ್ರಕರಣವಿದು.
ಸುಮಾರು 65 ರಿಂದ 70 ವರ್ಷದ ವ್ಯಕ್ತಿಯೊಬ್ಬರು ಕಳೆದ ಮೂರು ದಿನಗಳ ಹಿಂದೆ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿನ ಒಂಟಿ ಹನುಮಪ್ಪನ ಗುಡಿಯ ಹತ್ತಿರ ಮೃತಪಟ್ಟಿದ್ದರು. ವ್ಯಕ್ತಿಯ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಕೇಶ್ವಾಪುರ ಠಾಣೆಯ ಪೊಲೀಸರು ಅನಾಮದೇಯ ವ್ಯಕ್ತಿ ಎಂದು ಶವವನ್ನು ಹುಬ್ಬಳ್ಳಿ ಕಿಮ್ಸನ ಶವಾಗಾರಕ್ಕೆ ರವಾನೆ ಮಾಡಿದ್ದರು.
ಅನಾಮಧೇಯ ಶವದ ತಪಾಸಣೆ ಮಾಡುವಾಗ ಜೇಬಿನಲ್ಲಿ ಬ್ಯಾಂಕ್ ಖಾತೆಯ ನಂಬರ್ ಲಭ್ಯವಾಗಿತ್ತು. ಅದರ ಬೆನ್ನು ಹತ್ತಿದಾಗ ಪ್ರಕರಣ ಬೇರೆಯದ್ದೆ ಸ್ವರೂಪ ಪಡೆದು, ಬ್ಯಾಂಕ್ ಖಾತೆ ಬೆಂಗಳೂರಿನವರದ್ದೆಂದು ಗೊತ್ತಾಗಿತ್ತು.
ಪೊಲೀಸರು ಮೃತಪಟ್ಟ ವ್ಯಕ್ತಿಯ ಚಹರೆಯ ಬಗ್ಗೆ ಖಾತೆ ನಂಬರಿನ ಹೆಸರಿನಲ್ಲಿದ್ದವರಿಗೆ ಮಾಹಿತಿ ನೀಡಿದಾಗ ಅವರು ಮೈಸೂರಿನ ರಾಜ ಮನೆತನಕ್ಕೆ ಸೇರಿದ ಅರಸು ವಂಶದ ಶ್ಯಾಮಸುಂದರರಾಜ ಎಂದು ತಿಳಿದು ಬಂದಿದೆ.
ಶ್ಯಾಮಸುಂದರರಾಜ ಅವರು 2017 ರಲ್ಲಿಯೇ ಬೆಂಗಳೂರಿನ ರಾಜಾಜಿನಗರದಿಂದ ಕಾಣೆಯಾಗಿದ್ದರು. ಹೀಗಾಗಿಯೇ ರಾಜಾಜಿನಗರದ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರನ್ನ ನೀಡಲಾಗಿತ್ತು.
ವಿವರವನ್ನ ಪಡೆದ ಅರಸು ಮನೆತನದ ಹಲವರು ಹುಬ್ಬಳ್ಳಿಗೆ ಬಂದು ಶ್ಯಾಮಸುಂದರರಾಜ ಅವರ ಅಂತ್ಯಕ್ರಿಯೆಯನ್ನ ನಗರದಲ್ಲಿಯೇ ಮಾಡಿ ಹೋಗಿದ್ದಾರೆ. ಅರಸು ಮನೆತನದ ಕುಡಿಯೊಂದು ಯಾವ ಕಾರಣಕ್ಕೆ ಬೀದಿ ಸಾವಾದರು ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.