Karnataka Voice

Latest Kannada News

ಹುಬ್ಬಳ್ಳಿಯಲ್ಲಿ ನೌಕರಿ ಆಮಿಷ: ರಾಜ್ಯದ ಮೂಲೆ ಮೂಲೆಯ ವಂಚಕರ ಬಂಧನ- ಪೊಲೀಸ್ ಕಮೀಷನರ್ ಕೊಟ್ಟ ಎಚ್ಚರಿಕೆ ಏನು….!?

Spread the love

ಹುಬ್ಬಳ್ಳಿ: ಅಮಾಯಕ ನಿರುದ್ಯೋಗಿ ಯುವಕ ಮತ್ತು ಯುವತಿಯವರಿಗೆ ಮೋಸ ಮಾಡುವ ಉದ್ದೇಶದಿಂದ WhatsUp, Face Book, Share Chat, E-mail ಮತ್ತು ಪತ್ರಿಕೆಗಳಲ್ಲಿ “ನಿರುದ್ಯೋಗಿಗಳಿಗೆ ಸುವರ್ಣಾವಕಾಶ,  Earn Extra Income, Work from Home, Part/Full, ಮನೆಯಿಂದ/ಆಪೀಸ್ ಕೆಲಸದ ನಡುವಿನಿಂದಲೇ, ಕೆಲಸ ಮಾಡಿ, ತಿಂಗಳಿಗೆ 14,000/- ರೂ. (ಅನಲಿಮಿಟೆಡ್ ಸ್ಯಾಲರಿ), ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿದೆ” ಎಂದು ಜಾಹಿರಾತು ನೀಡಿ, ಅದನ್ನು ನೋಡಿ ಕರೆ ಮಾಡುವ ಅಮಾಯಕ ನಿರುದ್ಯೋಗಿ ಯುವಕ ಯುವತಿಯರಿಗೆ ಹುಬ್ಬಳ್ಳಿಗೆ ಕರೆಯಿಸಿಕೊಂಡು ವಂಚನೆ ಮಾಡುತ್ತಿದ್ದ ತಂಡವನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನಿರುದ್ಯೋಗಿ ಯುವಕರಿಗೆಮೊದಲು 3 ರಿಂದ 5 ದಿನ ಟ್ರೇನಿಂಗ್ ಇರುತ್ತದೆ ಎಂದು ಊಟ ವಸತಿ ವ್ಯವಸ್ಥೆಯ ಸಲುವಾಗಿ 2650 ರೂ.ಗಳನ್ನು ಪಡೆದುಕೊಂಡು ಹುಬ್ಬಳ್ಳಿಯ ವಿದ್ಯಾನಗರದ ಬೇರೆ ಬೇರೆ ಏರಿಯಾಗಳಲ್ಲಿ ಟ್ರೇನಿಂಗ್ ನೀಡುತ್ತಿದ್ದರು. ಅವರಿಂದ 38080 ರೂ. ಕಟ್ಟಿಸಿಕೊಂಡು ನಂತರ ನಿಮ್ಮ ಕೈಕೆಳಗೆ ಮೂರು ಜನರನ್ನು ಮೇಂಬರ್/ಲಿಂಕ್ ಮಾಡಿ ಪ್ರತಿಯೊಬ್ಬರಿಂದ 38080 ರೂ.ಗಳಂತೆ ಪಡೆದುಕೊಂಡು ಅವರನ್ನು ಇದೇ ಕೆಲಸಕ್ಕೆ ಸೇರಿಸಿದರೆ, ನಿಮಗೆ ವೇತನ ಸಿಗುತ್ತದೆ ಎಂದು ಹೇಳಿ ಅಮಾಯಕ ನಿರುದ್ಯೋಗಿ ಯುವಕ ಯುವತಿಯರಿಗೆ ಮೋಸ ಮಾಡುತ್ತಿದ್ದವರ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿವಿದ್ಯಾನಗರ ಪೊಲೀಸ್ ಠಾಣೆಯ ಹಿಂದಿನ ಪೊಲೀಸ್ ಇನ್ಸಪೆಕ್ಟರ್ ಆನಂದ ಒನಕುದ್ರೆ, ಹಾಗೂ ಪಿಎಸ್ಐ ಶಿವಾನಂದ ಬನ್ನಿಕೊಪ್ಪ ನೇತೃತ್ವದಲ್ಲಿ ಮೊದಲು ಮೂವರನ್ನ ಬಂಧನ ಮಾಡಲಾಗಿತ್ತು. ತದನಂತರ ನಡೆದ ತನಿಖೆಯಲ್ಲಿ ಮತ್ತೆ ಏಳು ಜನರನ್ನ ಬಂಧನ ಮಾಡಲಾಗಿದೆ.

ಮೊದಲು ಬಂಧಿತರಾದವರನ್ನ ಹಾಲಿವಸ್ತಿ ಹುಬ್ಬಳ್ಳಿಯಲ್ಲಿರುವ ಮೂಲತಃ ಬಾಗಲಕೋಟೆ ಜಿಲ್ಲೆಯ ಜಂಬಗಿಕೇಡಿ ಗ್ರಾಮದ ಪೂಜಾ ಬಸವರಾಜ ಕರಿಯಪ್ಪಗೋಳ, ಬೆಳಗಾವಿ ಜಿಲ್ಲೆ ಹಳೇಎರಗುದ್ರಿ ಗ್ರಾಮದ ಇಜಾಜಅಹ್ಮದ ಮಲಿಕಜಾನ ನದಾಫ, ರೋಣ ತಾಲೂಕಿನ ಕೌಜಗೇರಿ ಗ್ರಾಮದ ನವೀದಭಾಷಾ ಸೈದುಸಾವ ಕುರಹಟ್ಟಿ ಎಂದು ಗುರುತಿಸಿ, ಅವರಿಂದ 35 ಸಾವಿರ ರೂಪಾಯಿ ಜಪ್ತಿ ಮಾಡಿ, ಮೂವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಮುಂದುವರೆದ ತನಿಖೆಯಲ್ಲಿ ನೂತನ ಪೊಲೀಸ್ ಇನ್ಸೆಪೆಕ್ಟರ್ ಮಹಾಂತೇಶ ಹೋಳಿ ನೇತೃತ್ವದಲ್ಲಿ ಆರೋಪಿಗಳಾದ ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಶಂಕರಲಿಂಗ ಭೀಮಶಿ ಹಂಚಿನಾಳ, ಬಾಗಲಕೋಟೆ ಜಿಲ್ಲೆ ಬದಾಮಿ ತಾಳೂಕಿನ ಗುಳೇದಗುಡ್ಡದ ಪ್ರಶಾಂತ ಚಂದ್ರಪ್ಪ ಚೌವ್ಹಾಣ, ಕೊಪ್ಪಳ ಜಿಲ್ಲೆ ಗಂಗಾವತಿಯ ದುರ್ಗಾಪ್ರಸಾದ ಕೃಷ್ಣಾ ಧೂಳಾ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ನೆಲ್ಲೂರ ಗ್ರಾಮದ ಅಭಿಲಾಷ ರಾಮಕೃಷ್ಣ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ವಿನಾಯಕ ನಾರಾಯಣಪ್ಪ ಪರಮಾರಿ ಹಾಗೂ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ನಾಗೂರ ಗ್ರಾಮದ ಬಸವರಾಜ ಗುರುಲಿಂಗಪ್ಪ ಸಿಂಗಾಡೆ ಎಂಬುವವರನ್ನ ಬಂಧನ ಮಾಡಿ, ಇವರಿಂದ 15 ಸಾವಿರ ರೂಪಾಯಿ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳನ್ನ ಬಂಧನ ಮಾಡಿರುವ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ನಿರುದ್ಯೋಗಿ ಯುವಕ ಯುವತಿಯವರು ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗದ/ನೌಕರಿಯ ಬಗ್ಗೆ ಬರುವ ಜಾಹೀರಾತುಗಳನ್ನು ನೋಡಿ, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಯಾವುದೇ ವ್ಯಕ್ತಿಗೆ ಹಣವನ್ನು ಕೊಡಬಾರದು. ಈ ಬಗ್ಗೆ ಜಾಗೃತರಾಗಿರಬೇಕು ಎಂದು ಸಾರ್ವಜನಿಕರಿಗೆ ಸೂಚಿಸಿದ್ದಾರೆ.


Spread the love

Leave a Reply

Your email address will not be published. Required fields are marked *