ನಾಳೆ FDA Exam… ಹೊರಗೆ ಖಾಕಿ, ಒಳಗೆ ಸಿಸಿಟಿವಿ ಕಾವಲು…!
1 min readಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿರುವ ಪ್ರಥಮ ದರ್ಜೆ ಸಹಾಯಕರು ಹುದ್ದೆಗಳಿಗೆ ಫೆಬ್ರುವರಿ 28 ಅಂದರೆ ನಾಳೆ ರಾಜ್ಯಾದ್ಯಂತ ಪರೀಕ್ಷೆ ನಡೆಯಲಿದೆ.
ಕಳೆದ ಸಲ ಎಫ್ ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿ ಕೋಲಾಹಲ ಸೃಷ್ಟಿಯಾಗಿತ್ತು. ಆ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಪಡಿಸಲಾಗಿತ್ತು. ರದ್ದುಗೊಂಡಿದ್ದ ಆ ಪರೀಕ್ಷೆಯೇ ನಾಳೆ ರಂದು ನಡೆಯಲಿದೆ. ಪೊಲೀಸ್ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯುತ್ತಿರುವುದು ವಿಶೇಷ. ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಈ ಸಲ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಆದರೆ, ಕೆಪಿಎಸ್ ಸಿಯಲ್ಲಿ ಆಗುತ್ತಿರುವ ಕರ್ಮಕಾಂಡಗಳನ್ನು ಅರಿತಿರುವ ಅಭ್ಯರ್ಥಿಗಳು ಈ ಸಲವೂ ತುಂಬಾ ಆತಂಕದಲ್ಲಿದ್ದಾರೆ.
ಹೊರಗೆ ಖಾಕಿ ಕಣ್ಗಾವಲು, ಒಳಗೆ ಸಿಸಿಟಿವಿ..!
ಕರ್ನಾಟಕ ಲೋಕಸೇವಾ ಆಯೋಗ, ಪರೀಕ್ಷಾ ಪದ್ದತಿ ಜನರ ಅಪಹಾಸ್ಯಕ್ಕೆ ಗುರಿಯಾಗಿದೆ. ಇನ್ನಷ್ಟು ಮುಜುಗರದಿಂದ ಪಾರಾಗುವ ನಿಟ್ಟಿನಲ್ಲಿ ಕೆಪಿಎಸ್ ಸಿ ಈ ಸಲ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ ಖಾಕಿ ಕಣ್ಗಾವಲಿಟ್ಟಿದೆ. ಕೆಪಿಎಸ್ ಸಿ`ಲೀಕಾಸುರ’ರ ಹಾವಳಿ ತಪ್ಪಿಸಲು ವಿಶೇಷ ಪೊಲೀಸ್ ತಂಡ ಅಲರ್ಟ್ನಲ್ಲಿದೆ. ಅಕ್ರಮ ತಪ್ಪಿಸುವ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿಗೂ ಸಿಸಿಟಿವಿ ಹಾಕಿಸಲಾಗಿದೆ. ಪರೀಕ್ಷೆ ಪಾರದರ್ಶಕವಾಗಿ ನಡೆಸಲು ಕೆಪಿಎಸ್‍ಸಿ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ.
ಅಭ್ಯರ್ಥಿಗಳಿಗೆ ಅಗತ್ಯ ಮಾಹಿತಿ ಇಲ್ಲಿದೆ…
1. ಹಳೆಯ ಪ್ರವೇಶ ಪತ್ರ ರದ್ದಾಗಿದೆ. ಹಾಗಾಗಿ ಕೆಪಿಎಸ್ ಸಿ ವೆಬ್ ಸೈಟ್ ನಿಂದ ಹೊಸ ಪ್ರವೇಶಪತ್ರ ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.
2. ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ಮೊಬೈಲ್ ಮನೆಯಲ್ಲೇ ಬಿಟ್ಟು ಬಂದರೆ ಉತ್ತಮ
3. ಮಾಸ್ಕ್ ಅನಿವಾರ್ಯ. ಮಾಸ್ಕ್ ಇಲ್ಲದೇ ಹೋದರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇರುವುದಿಲ್ಲ
4. ಕೋವಿಡ್ ಮಾರ್ಗಸೂಚಿ ಪಾಲಿಸಲೇಬೇಕು. ಸೋಶಿಯಲ್ ಡಿಸ್ಟೆನ್ಸ್ ಪಾಲಿಸಿ. ಕೈಯಲ್ಲೊಂದು ಸಣ್ಣ ಸಾನಿಟೈಸರ್ ಇದ್ದರೆ ಇನ್ನೂ ಉತ್ತಮ.
5. ಜ್ವರ ಅಥವಾ ಜ್ವರದ ಲಕ್ಷಣ ಇದ್ದರೆ ಮುನ್ನೆಚ್ಚರಿಕೆ ವಹಿಸಿ. ಪರೀಕ್ಷಾಧಿಕಾರಿಗಳಿಗೆ ಮೊದಲೇ ತಿಳಿಸಿ. ಯಾಕೆಂದರೆ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ. ದೇಹದಲ್ಲಿ ನಿಗದಿಗಿಂತ ಅಧಿಕ ಟೆಂಪರೇಚರ್ ಇದ್ದರೆ ನಿಮಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸುತ್ತಾರೆ.
6. ಅಪರಿಚಿತರು ಸಿಕ್ಕಿ ಪ್ರಶ್ನೆ ಪತ್ರಿಕೆ ಇತ್ಯಾದಿ ವಿಚಾರಗಳ ಬಗ್ಗೆ ನಿಮ್ಮಲ್ಲೇನಾದರೂ ಮಾತಾಡಿದರೆ, ಅಂತವರ ಬಗ್ಗೆ ಕೂಡಲೇ ಪೊಲೀಸರಿಗೆ ತಿಳಿಸಿ.
7. ಏನೇ ಸಮಸ್ಯೆಗಳೆದುರಾದರೂ ಕೂಡಲೇ ಪರೀಕ್ಷಾಧಿಕಾರಿಗಳಿಗೆ ಅಥವಾ ಸ್ಥಳದಲ್ಲಿರುವ ಪೊಲೀಸರಿಗೆ ತಿಳಿಸಿ.
8. ಪ್ರವೇಶ ಪತ್ರ, ನೀರು, ಸಾನಿಟೈಸರ್, ಮಾಸ್ಕ್ ಇತ್ಯಾದಿ ಅಗತ್ಯ ಪರಿಕರಗಳನ್ನು ಮೊದಲೇ ತೆಗೆದಿಟ್ಟುಕೊಳ್ಳಿ. ಕೊನೆಯ ಕ್ಷಣದಲ್ಲಿ ಮರೆತುಬಿಡಬೇಡಿ..!
9. ಅರ್ಧ ಗಂಟೆ ಮೊದಲೇ ಪರೀಕ್ಷಾ ಕೇಂದ್ರ ತಲುಪಿ.
ನಿಮಗೆ ಇದು ಗೊತ್ತಿರಲಿ…!
1057 ಕೇಂದ್ರಗಳಲ್ಲಿ ಕೆಪಿಎಸ್ ಸಿ FDA ಪರೀಕ್ಷೆ ನಡೆಸುತ್ತಿದೆ. 3.74 ಲಕ್ಷ ಅಭ್ಯರ್ಥಿಗಳು ಪರೀಕ್ಷೆಬರೆಯಲಿದ್ದಾರೆ. ಯಾವ ಕೇಂದ್ರಗಳಲ್ಲಿ ಸಮಸ್ಯೆಯಾಗಬಹುದೆಂಬ ಅನುಮಾನ ಪೊಲೀಸರಿಗೂ ಇದೆ. ಹಾಗಾಗಿ, 433 ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನೂ ಗುರುತಿಸಲಾಗಿದೆ.