ರಸ್ತೆ ಅಪಘಾತ: ಹೆಬ್ಬಳ್ಳಿಯ ಎರಡು ಮಕ್ಕಳ ತಂದೆ ಸಾವು..!

ಹುಬ್ಬಳ್ಳಿ: ಎರಡು ಬೈಕುಗಳ ಮುಖಾಮುಖಿ ಡಿಕ್ಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಪರಮೇಶ್ವರ ಮೊರಬದ ಎಂಬಾತ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಹೆಬ್ಬಳ್ಳಿ ಗ್ರಾಮಕ್ಕೆ ಬರುತ್ತಿದ್ದ ವೇಳೆಯಲ್ಲಿ ಹುಬ್ಬಳ್ಳಿ ಬಳಿಯ ಹೆಬ್ಬಳ್ಳಿ ರಸ್ತೆಯ ಜೈನ್ ಕಾಲೇಜ್ ಬಳಿ ದುರ್ಘಟನೆ ಸಂಭವಿಸಿತ್ತು. ಹುಬ್ಬಳ್ಳಿಯಿಂದ ಹೆಬ್ಬಳ್ಳಿ ಗ್ರಾಮಕ್ಕೆ ಹೊರಟಿದ್ದ ಪರಮೇಶ್ವರ ಮೊರಬದ ಹಾಗೂ ಮೌಲಾ ಎಂಬಿಬ್ಬರಿದ್ದ ಬೈಕಿಗೆ ಬಿಜೆಪಿ ಮುಖಂಡರ ಹೊಲದಲ್ಲಿ ಕಾರ್ಯನಿರ್ವಹಿಸುವ ಕೊಂಡಯ್ಯ ಎಂಬಾತನ ಬೈಕ್ ಡಿಕ್ಕಿ ಹೊಡೆದಿತ್ತು.
ಇದರಿಂದ ಹೆಬ್ಬಳ್ಳಿ ಗ್ರಾಮದ ಪರಮೇಶ್ವರ ಮೊರಬದ ಎಂಬಾತನ ಸ್ಥಿತಿ ಗಂಭೀರವಾಗಿ ಚಿಕಿತ್ಸೆಗಾಗಿ ಕಿಮ್ಸಗೆ ದಾಖಲು ಮಾಡಲಾಗಿತ್ತು. ಕಳೆದ ಮೂರು ದಿನದಿಂದ ಚಿಕಿತ್ಸೆ ನಡೆಯುತ್ತಿದ್ದರೂ, ಚಿಕಿತ್ಸೆ ಫಲಿಸದೇ ಪರಮೇಶ್ವರ ಮೊರಬದ ಸಾವಿಗೀಡಾಗಿದ್ದಾನೆ.
ಹೆಬ್ಬಳ್ಳಿ ಗ್ರಾಮದಲ್ಲಿ ಇಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದ ಪರಮೇಶ್ವರ ಮೊರಬದ ಅವರಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿದ್ದು, ಮನೆಯಲ್ಲೀಗ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದ ಹಾಗೇ ಹುಬ್ಬಳ್ಳಿ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.