ಕಿಲಾಡಿ ಕಳ್ಳ- ಜೊತೆಗೊಬ್ಬ ಮಳ್ಳನ ಬಂಧಿಸಿದ ಸಿಸಿಬಿ ಪೊಲೀಸರು..!
1 min readಧಾರವಾಡ: ನಾನು ದುಡಿದುಕೊಂಡು ಜೀವನ ನಡೆಸಲು ದೂರದ ಮೈಸೂರಿನಿಂದ ಬಂದಿದ್ದೇನೆ. ನನಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ. ನೀವೇ ಹೇಳಬೇಕು ಎಂದುಕೊಂಡು ಧಾರವಾಡ ನಗರದ ಎಲ್ಲ ಠಾಣೆಗಳನ್ನ ಸುತ್ತಿದ್ದ ಕಿಲಾಡಿಯೇ ಪ್ರಮುಖ ಮನೆಗಳ್ಳ ಮತ್ತೂ ಬೈಕ್ ಕಳ್ಳ ಎಂಬುದನ್ನ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಮೈಸೂರಿನ ಅನಿಲಕುಮಾರ ಮರಿಸಿದ್ದೇಗೌಡ ವೈ.ಕೆ ಎಂಬಾತ ಕಳೆದ ಎರಡ್ಮೂರು ವರ್ಷದಿಂದ ಧಾರವಾಡದ ಎಂ.ಆರ್.ನಗರದಲ್ಲಿ ವಾಸಿಸುತ್ತಿದ್ದ. ಹಾಗಾಗಿಯೇ, ಕಳ್ಳತನ ನಡೆದಾಗೊಮ್ಮೆ ಠಾಣೆಗೆ ಬಂದು, ನನಗೆ ತೊಂದರೆ ಕೊಡಬೇಡಿ ಸರ್, ನಾನು ಬಡವ. ದುಡಿಯಲು ಬಂದಿದ್ದೇನೆ’ ಎನ್ನುತ್ತಲೇ ದಿನಗಳನ್ನ ನೂಕಿದ್ದ.
ಕಿಲಾಡಿ ಕಳ್ಳನ ಆಟಾಟೋಪವನ್ನ ಕಮೀಷನರೇಟಿನ ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದು, ಅನಿಲಕುಮಾರನಿಗೆ ಸಾಥ್ ಕೊಡುತ್ತಿದ್ದ ಧಾರವಾಡ ತಾಲೂಕಿನ ನಾಗಲಾವಿ ಗ್ರಾಮದ ದರ್ಗಾ ಓಣಿಯ ನಿಂಗಪ್ಪ ಅಲಿಯಾಸ್ ರಾಜಾ ಯಲ್ಲಪ್ಪ ತಡಕೋಡ ಎಂಬಾತನನ್ನೂ ಬಂಧನ ಮಾಡಲಾಗಿದೆ.
ಬಂಧಿತ ಕಿಲಾಡಿಗಳಿಂದ 110 ಗ್ರಾಂ ಚಿನ್ನ, 2ಕೆಜಿ ಬೆಳ್ಳಿಯ ಆಭರಣಗಳು, ಘಟಪ್ರಭಾದಲ್ಲಿ ಕದ್ದು ತಂದಿರುವ ಎರಡು ಬೈಕುಗಳು, ಐದು ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಧಾರವಾಡದಲ್ಲಿ ಡಿಸೆಂಬರ್ ವೇಳೆಯಲ್ಲಿ ನಡೆದ ಕಳ್ಳತನ ಪ್ರಕರಣಗಳು ಈ ಮೂಲಕ ಪತ್ತೆಯಾಗಿವೆ.
ಕಾರ್ಯಾಚರಣೆಯನ್ನ ಇನ್ಸಪೆಕ್ಟರುಗಳಾದ ಭರತರೆಡ್ಡಿ, ಅಲ್ತಾಪ ಮುಲ್ಲಾ ಇವರ ನೇತೃತ್ವದಲ್ಲಿ ಎಎಸ್ಐ ಶಿವಾಜಿ ಸಾಳುಂಕೆ, ಎಂ.ಎಚ್.ಶಿವರಾಜ, ಹವಲ್ದಾರಗಳಾದ ಎಸ್.ಪಿ.ಲಮಾಣಿ, ರಾಜೀವ ಬಿಷ್ಟಂಡೇರ್, ಎನ್.ಓ.ಜಾಧವ, ಎಂ.ಎಸ್.ಚಿಕ್ಕಮಠ, ಪಿ.ಸಿ.ಸೋಗಿ, ಎನ್.ಐ.ನೀಲಗಾರ, ಎನ್.ಎಸ್.ಬೋಗೂರ, ಆರ್.ಕೆ.ಬಡಂಕರ, ಪೇದೆಗಳಾದ ಡಿ.ಎನ್.ಗುಂಡಗೈ, ಎಸ್.ಎಚ್.ಕೆಂಪೋಡಿ, ಅನಿಲ ಹುಗ್ಗಿ, ಸಂತೋಷ ಇಚ್ಚಂಗಿ, ಆರ್.ಎಸ್.ಗುಂಜಾಳ, ವಿ.ಆರ್.ಮರಿಯಪ್ಪನವರ, ಬಿ.ವಿ.ಸಣ್ಣನವರ, ಐ.ಕೆ.ಅತ್ತಾರ, ರವಿ ಗೋಮಪ್ಪನವರ, ಚಾಲಕ ಜಗದೀಶ ಪೂಜಾರ ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನ ಚರಂತಿಮಠ ಗಾರ್ಡನ್ ಪ್ರದೇಶದಲ್ಲಿ ಹಿಡಿದಿದ್ದರಿಂದ ಪ್ರಕರಣವೂ ಧಾರವಾಡ ಶಹರ ಠಾಣೆಯಲ್ಲಿ ದಾಖಲಾಗಿದೆ.