ನನ್ನ ಬರ್ತಡೇಗೆ ಸಿದ್ಧು ಬಂದಿದ್ದೇ ದೊಡ್ಡ ಗಿಫ್ಟ್: ಯಡಿಯೂರಪ್ಪ

ಬೆಂಗಳೂರು: 60ನೇ ವರ್ಷದ ನನ್ನ ಹುಟ್ಟುಹಬ್ಬಕ್ಕೆ ವಾಜಪೇಯಿ ಬಂದಿದ್ದರು. ಇವತ್ತು ಸಿದ್ಧರಾಮಯ್ಯ ಬಂದು ನನಗೆ ಅತೀವ ಖುಷಿಯನ್ನ ನೀಡಿದ್ದಾರೆಂದು 78ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ನನ್ನ 60ನೇ ವರ್ಷದ ಹುಟ್ಟುಹಬ್ಬಕ್ಕೆ ವಾಜಪೇಯಿ ಬಂದಿದ್ದರು. ಅಂದು ವಾಜಪೇಯಿ ಅವರನ್ನು ಆಹ್ವಾನಿಸಿದ್ದಾಗ ಅವರು ಒಂದು ಮಾತು ಹೇಳಿದ್ದರು. ಸಾಮಾನ್ಯವಾಗಿ ನಾನು ಹುಟ್ಟುಹಬ್ಬದ ಕಾರ್ಯಕ್ರಮಗಳಿಗೆ ಹೋಗಲ್ಲ, ಆದರೆ ಯಡಿಯೂರಪ್ಪನವರಿಗಾಗಿ ಬರುತ್ತೇನೆ ಎಂದು ಹೇಳಿ ವಾಜಪೇಯಿ ಬಂದಿದ್ದರು.
ಸಿದ್ದರಾಮಯ್ಯ ನವರು ಇಂದು ನನ್ನ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬಂದಿರುವುದೇ ವಿಶೇಷ. ಅವರು ಬಂದು ನನ್ನನ್ನು ಹರಸಿರುವುದು ಈ ಕಾರ್ಯಕ್ರಮಕ್ಕೆ ದೊಡ್ಡ ಮೆರಗು ಸಿಕ್ಕಿದೆ. ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ನಾವಿಬ್ಬರೂ ಒಟ್ಟಿಗೇ ವಿಧಾನಸಭೆ ಪ್ರವೇಶಿಸಿದ್ದನ್ನು ನೆನಪಿಸಿದ್ದು ಸಂತಸ ತಂದಿದೆ ಎಂದರು.