ತಾರೆಗಳ ತೀರದಲ್ಲಿ

ಕಾರವಾರ: ಹಾಯಾದ ಇಳಿ ಸಂಜೆಯಲ್ಲಿ, ಕಡಲ ತೀರಗಳಲ್ಲಿ ಕಾಲ ಕಳೆಯುವ ಖುಷಿಯೇ ಒಂದು ವಿಶಿಷ್ಟ ಅನುಭವ. ತಣ್ಣನೆಯ ಗಾಳಿ, ಚುಮು ಚುಮು ಚಳಿ, ಆಗೊಮ್ಮೆ ಈಗೊಮ್ಮೆ ಬಂದು ಕಾಲಿಗೆ ಮುತ್ತಿಕ್ಕುವ ನೀರಿನ ಅಲೆಗಳ ನಡುವೆ, ಅರಿವಿಗೆ ಬಾರದೆ ಕಳೆದು ಹೋಗುವ ಸಂಜೆಗಳು, ಮತ್ತೆ ಮತ್ತೆ ತನ್ನತ್ತ ಕೈ ಬೀಸಿ ಕರೆಯುತ್ತಲೆ ಇರುತ್ತವೆ.
ಹೀಗೆ ಎರಡು ದಿನಗಳಿಂದ ಕಾರವಾರದ ಮಾಜಾಳಿ ಸಮುದ್ರ ತೀರದಲ್ಲಿ ಕಾಲ ಕಳೆಯುತ್ತಿದ್ದ ಜನರಿಗೆ ಅಚ್ಚರಿಯೊಂದು ಕಾದಿತ್ತು. . ಹಿಂದೆಂದೂ ಕಾಣದ ಈ ದೃಶ್ಯಗಳನ್ನು ಕಂಡು ಅದೆಷ್ಟೋ ಜನ ಗಾಭರಿ ಅಚ್ಚರಿಗಳಿಗೆ ಒಳಗಾಗಿದ್ದಾರೆ. ಕಾರವಾರ ಜನತೆಯ ಈ ಅಚ್ಚರಿಗೆ ಕಾರಣವಾಗಿದ್ದು ರಾಶಿ ರಾಶಿ ನಕ್ಷತ್ರಗಳನ್ನು ಹೊತ್ತು ತಂದು ದಡಕ್ಕೆ ಬೀಸಾಡುತ್ತಿರುವ ಕಡಲ ಅಲೆಗಳು…….!
ಎನಿದು ಅಚ್ಚರಿ ಅಂತಿರಾ……
ಹೌದು ಕಳೆದೆರಡು ವಾರದಿಂದ ಆ ಪ್ರದೇಶದ ಬೀಚ್‍ವೊಂದರ ದಡಕ್ಕೆ ಬಂದು ಅಪ್ಪಳಿಸುತ್ತಿರುವ ಅಲೆಗಳು ಎಂದಿನಂತೆ ಸಾಮಾನ್ಯವಾಗಿ ಇರಲಿಲ್ಲ. ಬದಲಾಗಿ ಬೆಂಕಿಯ ಜ್ವಾಲೆಯಿಂದ ಹೊರಹೊಮ್ಮುವ ಬೆಳಕಿನ ರೂಪದ ಅಲೆಗಳು ಏಕಾ ಏಕಿ ಕಾಣಲು ಶುರುವಾಗಿವೆÉ. ಮೊದ ಮೊದಲು ಹೆದರಿಕೊಂಡಿದ್ದ ಜನ ನಿಧಾನವಾಗಿ ಚೇತರಿಸಿಕೊಂಡು ಆ ಸುಂದರ ದೃಶ್ಯಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಈ ರೀತಿಯ ಹಳದಿ ಮಿಶ್ರಿತ ನೀಲಿ ಬಣ್ಣದಿಂದ ಕೂಡಿದ ನೀರಿನ ಅಲೆಗಳು, ಕಡಲ ತೀರಗಳಲ್ಲಿ ಸುಂದರವಾದ ದೃಶ್ಯಗಳನ್ನು ಸೃಷ್ಟಿಸುತ್ತಿವೆ. ಈ ವಿಧ್ಯಮಾನಕ್ಕೆ ಪ್ರಮುಖ ಕಾರಣ ಒಂದು ವಿಧದ ಪಾಚಿ ಅಥವಾ ಶೈವಲ (ಆಡು ಬಾಷೆಯ ಕಪ್ಪೆಜಂಡು) ಎಂದರೆ ಆಶ್ಚರ್ಯವೆನಿಸದೆ ಇರದು.

ಸಾಮಾನ್ಯವಾಗಿ ನೀರಿನಲ್ಲಿ ಬೆಳೆಯುವ ಪಾಚಿಗಳಲ್ಲಿ ವೈವಿಧ್ಯತೆ ಇದೆ. ಸಮುದ್ರ, ನದಿ, ಹಳ್ಳ ಕೊಳ್ಳಗಳಲ್ಲಿ ರಾತ್ರಿ ಸಮಯದಲ್ಲಿ ಮಿಂಚುತ್ತಿರುವ ನೀರಿನ ಹಿಂದೆ ಈ ಪಾಚಿಗಳ ಕುರುಹು ಇರುತ್ತದೆ. ಭೂಮಿಯ ವಿವಿಧ ಭಾಗಗಳಲ್ಲಿ ಅನೇಕ ನೀರಿನ ಆಗರಗಳಲ್ಲಿ ಈ ವಿಶಿಷ್ಟ ರೀತಿಯ ಜೀವಿಗಳು ತಮ್ಮ ಮಿಂಚುವ ಗುಣದಿಂದ ತನ್ನ ಸುತ್ತಮುತ್ತಲಿನ ಪ್ರದೇಶವನ್ನು ಆಕರ್ಷಮಯವಾಗಿಸುತ್ತವೆ.
ನಕ್ಷತ್ರ ಉರುಳಿ ನೆಲಕ್ಕೆ ಬಿದ್ದಂತೆ:
ಹಿಂದೊಮ್ಮೆ ಚೆನೈನ ಕಡಲ ತೀರದಲ್ಲಿ ಗೋಚರಿಸಿದ ವರ್ಣರಂಚಿತ ಅಲೆಗಳಿಗೆ ಕಾರಣವಾಗಿದ್ದು ನಾಕ್ಟಿಲುಕಾ ಸಿಂಟಿಲೆನ್ಸಿಸ್ ಎಂಬ ಪಾಚಿ ಎಂಬುದು ತಡವಾಗಿ ಬೆಳಕಿಗೆ ಬಂದಿತ್ತು. ಈ ಶೈವಲಗಳು ತಮ್ಮ ದೈನಂದಿನ ಬದುಕಿನಲ್ಲಿ ಮಗ್ನವಾಗಿರುತ್ತವೆ. ಪ್ರಕೃತಿಯಲ್ಲಿ ಉಂಟಾದ ಏರುಪೇರುಗಳಿಂದಾಗಿ ಭಯಾನಕ ಸಮುದ್ರದ ಅಲೆಗಳು ಎದ್ದಾಗ ಈ ಜೀವಿಗಳು ವಿಚಲಿತಗೊಳ್ಳುತ್ತವೆ. ಆಗ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ತಂತ್ರವಾಗಿ ಕೆಲವು ಬಗೆಯ ರಾಸಾಯನಿಕಗಳನ್ನು ಹೊರಸೂಸುತ್ತವೆ. ಅಂತಹ ರಾಸಾಯನಿಕಗಳು ಪ್ರಕಾಶಮಾನವಾದ ಬೆಳಕಿನಿಂದ ಕೂಡಿದ ಕಾರಣ, ನೀರಿನ ಅಲೆಗಳು ಮಿಂಚಿನಿಂದ ಕೂಡಿದ ವರ್ಣರಂಚಿತ ಅಲೆಗಳಾಗಿ ಮಾರ್ಪಡುತ್ತವೆ. ಇದು ಕ್ಷಣ ಕಾಲ ನಕ್ಷತ್ರಗಳು ಉರುಳಿ ನೆಲಕ್ಕೆ ಬಿದ್ದ ಸುಂದರ ದೃಶ್ಯಗಳನ್ನು ಸೃಷ್ಟಿಸುತ್ತವೆ. ಹಾಗಾಗಿ ಅಂತಹ ಕಡಲ ತೀರಗಳಿಗೆ ತಾರಾ ತೀರಗಳು ಎಂಬ ಪ್ರಖ್ಯಾತಿಯು ಇದೆ. ಅಂತಹವುಗಳೆಂದರೆ ಪೊರ್ಟೊರಿಕಾ, ಕ್ಯಾಲಿಫೋರ್ನಿಯಾದ ಸ್ಯಾನ್‍ಡಿಯಾಗೋ ಕಡಲು, ಫ್ಲೋರಿಡಾದ ನಾವರ್ಲೇ, ಜಪಾನಿನ ಟೊಯಾಮೋ ನದಿ ತೀರ, ಸೇರಿದಂತೆ ಮಾಲ್ಡಿವ್ಸ್, ಹಾಗೂ ನಮ್ಮದೆ ಲಕ್ಷದ್ವೀಪಗಳು, ಅಂಡಮಾನ್ ನಿಕೊಬಾರ್, ಮಹಾರಾಷ್ಟ್ರದ ಜುಹಿ ಬೀಚ್ ನಲ್ಲಿಯೂ ಆಗಾಗ ಈ ದೃಶ್ಯಗಳು ಕಂಡು ಬರುತ್ತವೆ.

ವೈಜ್ಞಾನಿಕವಾಗಿ ಇದು ಅಹಿತಕರ ಬೆಳವಣಿಗೆ ಎಂದೆ ಪರಿಗಣಿಸಲ್ಪಡುತ್ತದೆ. ಎಕೆಂದರೆ ಅವು ಹೊರಸೂಸುವ ರಾಸಾಯನಿಕಗಳು ಅಮೋನಿಯಾದಿಂದ ಕೂಡಿದ್ದು, ಅತಿಯಾದ ಅಮೋನಿಯಾ ಇನ್ನಿತರೆ ಜಲಚರ ಜೀವಿಗಳ ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತವೆ. ಮತ್ತು ಅವುಗಳನ್ನೆ ಅಹಾರವಾಗಿ ಬಳಸುವ ಮಾನವನ ಆರೋಗ್ಯದ ಮೇಲೂ ಇದು ಪರೋಕ್ಷ ದಾಳಿ ಎನ್ನಬಹುದು.
- ಉಮರ್ ಫಾರೂಕ್ ಜೆ. ಮೀರಾನಾಯಕ್