ಪ್ರಧಾನಿಯ ಸುಧಾರಣಾ ಕ್ರಮಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಫುಲ್ ಖುಷ್

ಬೆಂಗಳೂರು: ಕೋವಿಡ್ 19ರ ಸಂಕಷ್ಟದ ಸಂದರ್ಭದಲ್ಲಿ ನವ ಭಾರತ ನಿರ್ಮಾಣಕ್ಕಾಗಿ ಹಾಗೂ ಸ್ವಾವಲಂಭಿ ಭಾರತ ಅಭಿಯಾನಕ್ಕಾಗಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಗುಡಿಕೈಗಾರಿಕೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‍ಎಂಇ) 3 ಲಕ್ಷ ಕೋಟಿ ರೂಪಾಯಿ ಸಾಲ ಸೌಲಭ್ಯವನ್ನು ನೀಡುವುದಲ್ಲದೇ. ಸಾಲ ಮರುಪಾವತಿಗೆ 4 ವರ್ಷ ಕಾಲಾವಕಾಶ ನೀಡಲಾಗಿದೆ. ಇದರಿಂದ 45 ಲಕ್ಷ ಕಿರು ಉದ್ಯಮಿಗಳಿಗೆ ನೆರವಾಗುವುದಲ್ಲದೇ ದುಡಿಯುವ ವರ್ಗಕ್ಕೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಅನುಕೂಲವಾಗುವುದರ ಜೊತೆಗೆ ದೇಶದ ಆರ್ಥಿಕ ವಹಿವಾಟು ವೃದ್ಧಿಸುವುದು. ದುಡಿಯುವ ವರ್ಗಗಳಿಗೆ ಮತ್ತು ಉದ್ಯಮಿಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ವಿಸ್ತರಿಸಲು 50 ಸಾವಿರ ಕೋಟಿ ರೂಪಾಯಿ ನೆರವು ನೀಡುವುದರಿಂದ ಉದ್ಯೋಗ ಸೃಷ್ಠಿಸಲು ಅನುಕೂಲವಾಗುತ್ತದೆ ಎಂದಿದ್ದಾರೆ.
72 ಲಕ್ಷ ಕಾರ್ಮಿಕರಿಗೆ ಇಪಿಎಫ್ ನೆರವು ನೀಡಲು 2500 ಕೋಟಿ ರೂ. ನೀಡುವುದು ಸ್ವಾಗತಾರ್ಹ ಕ್ರಮವಾಗಿದೆ. ಒಟ್ಟಾರೆ 5 ಸ್ತಂಭಗಳ ಆಧಾರದ ಮೇಲೆ ಭಾರತದ ಸ್ವಾವಲಂಭನೆಗೆ ಹಾಗೂ ಪುನಶ್ಚೇತನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮಗಳನ್ನು ಇಡೀ ದೇಶದ ಜನ ಮೆಚ್ಚುವಂತಹ ಕ್ರಮವೆಂದು ಭಾವಿಸುತ್ತೇನೆಂದು ಕಾರಜೋಳ ಹೇಳಿದ್ದಾರೆ.