ಮೈಮುಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪ: ಸಾಕ್ಷಿ ಸಮೇತ ಬಂದ ಸಾ.ರಾ.ಮಹೇಶ

ಮೈಸೂರು: ಮೈಮುಲ್ ಸಿಬ್ಬಂದಿ ಆಯ್ಕೆ ಹಗರಣವನ್ನ ಇಲಾಖಾ ತನಿಖೆಗೆ ಒಪ್ಪಿಸಿರುವುದನ್ನ ಮಾಜಿ ಸಚಿವ ಸಾ.ರಾ. ಮಹೇಶ್ ವಿರೋಧವ್ಯಕ್ತಪಡಿಸಿದ್ದು, ಆಯ್ಕೆ ಸಮಿತಿಯಲ್ಲಿ ಸಹಕಾರ ಇಲಾಖೆ ಜೆಡಿ ಇದ್ದಾರೆ. ಆದರೆ, ಕೊಡಗು ರಿಜಿಸ್ಟಾರ್ ಬಂದು ಜೆಡಿ ಅವರನ್ನ ತನಿಖೆ ಮಾಡ್ತಾರೆ. ಒಂದು ರೀತಿಯಲ್ಲಿ ಡಿಸಿಯನ್ನ ತಹಶೀಲ್ದಾರ್ ತನಿಖೆ ಮಾಡಿದಂತಿದೆ. ಇದರಿಂದ ಸತ್ಯ ಹೊರಬರೋದಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ ಆಕ್ರೋಶವ್ಯಕ್ತಡಿಸಿದ್ದಾರೆ.
ಆಡಿಯೋ ಬಿಡುಗಡೆ ಮಾಡಿದ್ದೇನೆ ಯಾಕೆ ತನಿಖೆ ಮಾಡಿಲ್ಲ..? ಆಯ್ಕೆ ಪ್ರಕ್ರಿಯೆ ನಿಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇನೆ. ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಮೆಗಾ ಡೈರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಓ.ಎಂ. ಆರ್ ಶೀಟ್ ಕೊಟ್ಟಿಲ್ಲ. ಈ ತನಕ ಕೀ ಆನ್ಸರ್ ಕೂಡ ಬಿಟ್ಟಿಲ್ಲ ?. ಹೆಚ್ಚುವರಿ 25 ಹುದ್ದೆಗೆ ಅರ್ಜಿ ಕರೆಯದೆ ಇದೇ ನೇಮಕಾತಿ ಪ್ರಕ್ರಿಯೆಗೆ ಸೇರಿಸಿರೋದು ಯಾರಿಗಾಗಿ.?. ನಾನೇ ಪೊಲೀಸ್ ಆಯುಕ್ತರಿಗೆ ತನಿಖೆ ದೂರು ಕೊಡ್ತೇನೆ. ನಾನು ಬಿಡುಗಡೆ ಮಾಡಿದ ಆಡಿಯೋ ತನಿಖೆ ಆಗಬೇಕು. ಕೊರೋನಾ ಕಾರಣವೊಡ್ಡಿ ಆಯ್ಕೆಯನ್ನ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆರೋಪಿಸಿದ್ದಾರೆ.
ಅನ್ಯಾಯವಾಗಿರುವ ಚೈತ್ರ ಹೇಳಿಕೆ:
ನಾನು ಮೈಮುಲ್ ಪರೀಕ್ಷೆಯಲ್ಲಿ ಅತೀ ಹೆಚ್ಚು 132 ಅಂಕ ಪಡೆದಿದ್ದೇನೆ. ಆದರೆ, 110ಕ್ಕಿಂತ ಕಡಿಮೆ ಅಂಕ ಪಡೆದವರಿಗೆ ಉದ್ಯೋಗ ಸಿಕ್ತಿದೆ. ನಾನು 9 ತಿಂಗಳಿಂದ ಈ ಮೈಮುಲ್ ಉದ್ಯೋಗಕ್ಕಾಗಿ ಪರದಾಡುತ್ತಿರುವೆ. ಆದರೆ, ಪರೀಕ್ಷೆ ಫಲಿತಾಂಶದಲ್ಲಿ ಅಕ್ರಮ ನಡೆಯುತ್ತಿದೆ ಅಂತಾ ಗೊತ್ತಾದಾಗ ಕೆಲವರ ಆಡಿಯೋ ರೆಕಾರ್ಡ್ ಮಾಡಿರುವೆ. ನನ್ನ ಬಳಿ ಉದ್ಯೋಗಕ್ಕಾಗಿ ಹಣದ ಬೇಡಿಕೆಯಿಟ್ಟಿರುವ ಹಾಗೂ ಅಭ್ಯರ್ಥಿಗಳು ಹಣ ನೀಡಿರುವ ಬಗ್ಗೆ ಸಂಭಾಷಣೆ ಇದೆ. ನಮಗೆ ನೇಮಕಾತಿ ನ್ಯಾಯ ಸಿಗದಿದ್ದರೆ ಎಲ್ಲಾ ಆಡಿಯೋಗಳನ್ನ ಬಹಿರಂಗಪಡಿಸುವೆ. ಒ.ಎಂ.ಆರ್ ಶೀಟ್ ಕೊಡದೆ, ಕೀ ಆನ್ಸರ್ ಬಿಡದೆ ಒಂದನೇ ಐದರಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅಂತಹವರಿಗೆ ಮಾತ್ರ ನೆಪ ಮಾತ್ರಕ್ಕೆ ಸಂದರ್ಶನ ಪತ್ರ ಬರುತ್ತಿದೆ. ಈಗಾಗಲೇ ಆಯ್ಕೆಯಾಗಿರೋ ಅಭ್ಯರ್ಥಿಗಳ ಪಟ್ಟಿಯೂ ಫೈನಲ್ ಆಗಿದೆ. ಸಂಭಾಷಣೆ ವೇಳೆ ಪ್ರತಿ ಹುದ್ದೆಗೆ 20 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಪಡೆಯಲಾಗಿದೆ ಎಂದು ಹೇಳಿದ್ದಾರೆ.