ಕುರಿಗಾಹಿಯನ್ನು ಹುಲಿ ಹೊತ್ಯೊಯ್ದಿರುವ ಶಂಕೆ: ಹುಡುಕಾಟ ನಡೆಸುತ್ತಿರುವ ಕುಟುಂಬ

ಮೈಸೂರು: ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ನೆರರಳಕುಪ್ಪೆ ಬಿ ಹಾಡಿ ಬಳಿಯಲ್ಲಿ ಕುರಿಗಾಯಿ ಜೇನುಕುರುಬ ಸಮುದಾಯದ ಜಗದೀಶ್ ನಾಪತ್ತೆಯಾಗಿದ್ದು, ಹುಲಿ ಆತನನ್ನ ಹೊತ್ತೋಯ್ದಿರಬಹುದೆಂದು ಶಂಕಿಸಲಾಗಿದೆ.
ಸೋಮವಾರ ಬೆಳಗ್ಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಸಂಜೆ ಕುರಿಗಳೊಂದಿಗೆ ಜಗದೀಶ್ ಮನೆಗೆ ಬಾರದಿದ್ದಾಗ ಸುತ್ತ ಮುತ್ತಲಿನಲ್ಲಿ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅರಣ್ಯದ ಹಂದಿ ಹಳ್ಳದಲ್ಲಿ ಜಗದೀಶರ ಟವೇಲ್, ಛತ್ರಿ, ಚಪ್ಪಲಿ ಪತ್ತೆಯಾಗಿವೆ. ಅಷ್ಟೇ ಅಲ್ಲ, ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಸ್ಥಳಕ್ಕೆ ಎಸಿಎಫ್ ಪ್ರಸನ್ನಕುಮಾರ್, ಶಿವಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾಕಾನೆಗಳಾದ ಗಣೇಶ, ಬಲರಾಮ ಸಹಾಯದಿಂದ ಕೋಂಬಿಂಗ್ ನಡೆಸುತ್ತಿದ್ದು, ರಾತ್ರಿ ಸುರಿದ ಅಲಿಕಲ್ಲು ಮಳೆಯಿಂದಾಗಿ ಕೋಂಬಿಂಗ್ ಸ್ಥಗಿತಗೊಂಡಿದೆ.