ವರದಕ್ಷಿಣೆ ಕಿರುಕುಳಕ್ಕೆ ಪೇದೆ ಪತ್ನಿ ಬಲಿ: ನಿವೇಶನಕ್ಕಾಗಿ ಪತ್ನಿ ಬಲಿ ಪಡೆದನೇ ಆರಕ್ಷಕ

ಮೈಸೂರು: ನಿವೇಶನಕ್ಕಾಗಿ ಪತ್ನಿಯನ್ನೇ ಬಲಿ ಪಡೆದನೇ ಪೇದೆ..? ಎಂದು ಸಂಶಯ ಪಡುವಂತ ಘಟನೆ ಕೆ.ಆರ್. ನಗರದ ಹೆಬ್ಬಾಳು ಗ್ರಾಮದಲ್ಲಿ ಸಂಭವಿಸಿದೆ.
ಗೃಹಿಣಿ ಭಾರತಿಯೇ ಸಾವನ್ನಪ್ಪಿದ್ದು, DAR ಪೊಲೀಸ್ ಶ್ರೀಧರ್, ತಂದೆ ಶಂಕರ್, ತಾಯಿ ನಿಂಗಾಜಮ್ಮ ಮೇಲೆ ಕೊಲೆ ಆರೋಪವನ್ನ ಭಾರತಿ ಪೋಷಕರು ಮಾಡಿದ್ದಾರೆ. 6ವರ್ಷಗಳ ಹಿಂದೆ ಶ್ರೀಧರ್ ಹಾಗೂ ಭಾರತಿ ನಡುವೆ ವಿವಾಹವಾಗಿತ್ತು. ಮದುವೆ ಸಮಯದಲ್ಲಿ 200 ಗ್ರಾಂ ಚಿನ್ನ, 3 ಲಕ್ಷ ನಗದು ಹಾಗೂ ಒಂದು ಬೈಕ್ ವರದಕ್ಷಿಣೆಯಾಗಿ ನೀಡಲಾಗಿತ್ತು. ಪ್ರಾರಂಭದಲ್ಲಿ ಅನ್ಯೋನ್ಯವಾಗಿ ದಾಂಪತ್ಯ ಜೀವನ ಸಾಗಿಸಿದ್ದರು. ಎರಡು ವರ್ಷಗಳಿಂದ ನಿವೇಶನಕ್ಕಾಗಿ ಪೇದೆ ಶ್ರೀಧರ್ ಪೀಡಿಸುತ್ತಿದ್ದ. ನಿವೇಶನ ನೀಡುವಲ್ಲಿ ಭಾರತಿ ಪೋಷಕರು ವಿಫಲರಾದ ನಂತರ ದಂಪತಿಗಳ ನಡುವೆ ಗಲಾಟೆಯಾಗಿತ್ತು. ಮೇ.25ರಂದು ಸುಟ್ಟ ಸ್ಥಿತಿಯಲ್ಲಿ ಭಾರತಿ ಪತ್ತೆಯಾಗಿದ್ದರು. ಗಾಯಗೊಂಡ ಭಾರತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ರಾತ್ರಿ ಭಾರತಿ ಸಾವಿಗೀಡಾಗಿದ್ದಳು. ಭಾರತಿ ಸಾವಿಗೆ ಪತಿ ಶ್ರಿಧರ್, ಮಾವ ಶಂಕರ್, ಅತ್ತೆ ನಿಂಗಜಾಮ್ ಕಾರಣ ಎಂದು ಪೋಷಕರ ಆರೋಪಿಸಿದ್ದು, ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.