SSLC ಪರೀಕ್ಷೆ ರದ್ದುಗೊಳಿಸಿ: ಮಕ್ಕಳ ಬಗ್ಗೆ ನಿಮಗೇಕೆ ಕಾಳಜಿಯಿಲ್ಲ- ಸರಕಾರವನ್ನ ತರಾಟೆಗೆ ತೆಗೆದುಕೊಂಡ ವಿಕಾಸ ಸೊಪ್ಪಿನ
ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಏನಾದರೂ ಅವಗಡಗಳು ಸಂಭವಿಸಿದರೆ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರವೇ ಹೊಣೆ ಹೊರಲಿ ಎಂದು ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಸಂಯೋಜಕ ವಿಕಾಸ ಸೊಪ್ಪಿನ ಹೇಳಿದ್ದಾರೆ.
ಈ ಬಗ್ಗೆ ಸೊಪ್ಪಿನ ಹೇಳಿಕೆ ನೀಡಿದ್ದು, ಅದು ಈ ಕೆಳಗಿನಂತಿದೆ…
ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯು ಇಂಗ್ಲೀಷ್ ಪರೀಕ್ಷೆಗೆ ಸುಮಾರು 27 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ.
ಸೋಂಕಿನ ಭಯದಿಂದ ಪೋಷಕರು ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿಲ್ಲ ಎನ್ನುವುದು ಇಲ್ಲಿ ದೃಡವಾಗುತ್ತದೆ. ಹಾಗಾದರೆ ಸರ್ಕಾರ ಬಲವಂತವಾಗಿ ಮಕ್ಕಳ ಮೇಲೆ ಪರೀಕ್ಷೆಯನ್ನು ಹೇರುತ್ತಿದೆ.
ಇದೇ ರೀತಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರ್ಕಾರ ಹಠ ಮಾಡುತ್ತಿರುವುದು ನೋಡಿದರೆ, ಯಾರದೋ ಒತ್ತಡಕ್ಕೆ ಒಳಗಾಗಿ ಎಡವಟ್ಟಿನ ತೀರ್ಮಾನಕ್ಕೆ ಕೈ ಹಾಕಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಇಂದು ಕಲ್ಬುರ್ಗಿ ಜಿಲ್ಲೆಯ ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಡಪಟ್ಟಿದೆ. ಇದೇ ರೀತಿ ಸಿದ್ಧಗಂಗಾ ಮಠದಲ್ಲಿಯೂ ಸಹ ಪರೀಕ್ಷೆ ಬರೆಯಲು ಆಗಮಿಸಿರುವ ಮಕ್ಕಳಿಗೆ ಕೋರೋಣ ತಗುಲಿರುವ ಸುದ್ದಿ ಹರಿದಾಡುತ್ತಿದೆ. ಪರೀಕ್ಷೆ ಬರೆದ ನಂತರ ಸೋಂಕು ಪತ್ತೆ ಆಗಿದ್ದರೆ ಮುಗ್ಧ ಜೀವಗಳ ಗತಿ ಏನು? ಸರ್ಕಾರ ಹೇಳುವ ರೀತಿ ಕೇವಲ ಹದಿನೈದು ವರ್ಷದ ಈ ಮಕ್ಕಳಿಗೆ ನಿಜಕ್ಕೂ ರೋಗ ನಿರೋಧಕ ಶಕ್ತಿ ಇದೆಯೇ ?
ಪಿಯು ಪರೀಕ್ಷೆಯ ವೇಳೆ ಮಕ್ಕಳ ನಡುವೆ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಸುವುದಾಗಿ ಮಾತು ಕೊಟ್ಡಿದ್ದ ಸರ್ಕಾರ ಒಂದು ಬೆಂಚಿಗೆ ಹಳೇ ಪದ್ದತಿಯಂತೆ ಇಬ್ಬರನ್ನೇ ಕೂರಿಸಿ ಪರೀಕ್ಷೆ ಬರೆಸಿತ್ತು.
ಇದೇ ರೀತಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಯೂ ಈ ಅವ್ಯವಸ್ಥೆಯೇ ಮುಂದುವರೆದು ಸೋಂಕು ಹರಡಿದರೆ ಯಾರು ಹೊಣೆ.
ರಾಜ್ಯದ ಬೊಕ್ಕಸದ ಮುಕ್ಕಾಲು ಭಾಗ ತುಂಬಿಸುವ ಸಿಲಿಕಾನ್ ಸಿಟಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಇಂದು ಅರ್ಧಕ್ಕೂ ಹೆಚ್ಚು ವಾರ್ಡುಗಳು ಸೀಲ್ ಡೌನ್ ಆಗುವ ಭೀತಿ ಯಲ್ಲಿರುವಾಗ ಇಂತಹ ಅನವಶ್ಯಕ ಪರೀಕ್ಷೆಗಳು ಬೇಕಾಗಿದೆಯೇ ? ಕೇವಲ ಒಂದು ಅಂಕಪಟ್ಟಿ ಹಾಗೂ ಮುಂದಿನ ವ್ಯಾಸಂಗಕ್ಕೆ ದಾಖಲಾಗಲು ಸುಲಭವಾಗುತ್ತದೆ ಎಂಬ ಕನಿಷ್ಠ ಕಾರಣದಿಂದ ಈ ರೀತಿಯ ಭಯಭೀತ ವಾತಾವರಣದಲ್ಲಿ ರಾಜ್ಯದ ಪೋಷಕರನ್ನು ತಳ್ಳುವುದು ನಿಜಕ್ಕೂ ದುರಂತದ ಸಂಗತಿ.
ಪಿಯು ಪರೀಕ್ಷೆ ವೇಳೆ ನಡೆದ ಅನೇಕ ಎಡವಟ್ಟುಗಳು ಮತ್ತೆ ನಡೆದೆ ನಡೆಯುತ್ತವೆ. ಆದ್ದರಿಂದ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವೈರಸ್ ಭಯದಲ್ಲಿ ನಡೆಸದೇ ಇರುವುದೇ ಉತ್ತಮ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಪೋಷಕರ ಆಶಯವಾಗಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಕುರಿತು ಸರ್ಕಾರ ಪುನರ್ ಪರಿಶೀಲಿಸಿ ಈ ಕೂಡಲೇ ರದ್ದುಗೊಳಿಸಿದ ಆದೇಶವನ್ನು ಪ್ರಕಟಿಸಬೇಕು. ಕೊರೋನಾ ಸೋಂಕು ಸಮುದಾಯ ಪ್ರಸರಣ ಭೀತಿಯ ಹಿನ್ನೆಲೆಯಲ್ಲಿ ನೆರೆಯ ತೆಲಂಗಾಣ ರಾಜ್ಯದಲ್ಲಿ SSLC ಪರೀಕ್ಷೆಯನ್ನು ರದ್ದುಪಡಿಸಿ ಉತ್ತೀರ್ಣ ಗೊಳಿಸಲಾಗಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರ ನಿರ್ಧಾರ ತಳೆಯಬಹುದು. ಪರೀಕ್ಷೆಗಳನ್ನು ನಡೆಸಲೇ ಬೇಕೆಂದರೆ ಅಕ್ಟೋಬರ್ ತಿಂಗಳವರೆಗೆ ಕಾಯಲಿ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.