ಪರಿಸರ ಪ್ರೇಮಿ ಕಾಮೇಗೌಡರಿಗೆ ಜೀವತಾವಧಿ ಉಚಿತ ಬಸ್ ಪಾಸ್
ಬೆಂಗಳೂರು: ಅಪರೂಪದ ಪರಿಸರ ಕಾಳಜಿಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರಿಗೆ ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜೀವಿತಾವಧಿ ಉಚಿತ ಬಸ್ ಪಾಸ್ ನೀಡಿದೆ.
ಮಾಧ್ಯಮವೊಂದರಲ್ಲಿ ಈ ಬಗ್ಗೆ ತಮ್ಮ ಆಸೆ ವ್ಯಕ್ತಪಡಿಸಿದ್ದ ಕಾಮೇಗೌಡರ ಅಭಿಲಾಷೆಯಂತೆ, ಉಚಿತ ಪಾಸ್ ವಿತರಿಸಲು ಮುಖ್ಯಮಂತ್ರಿಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದ್ದರು.
ಗೌಡರ ಪರಿಸರ ಕಾಳಜಿಗೆ ಮತ್ತೊಮ್ಮೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು,.. ಕಾಮೇಗೌಡರ ಪರಿಸರ ಸೇವೆ ಬಗ್ಗೆ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ತಮ್ಮ ‘ಮನ್ ಕಿ ಬಾತ್ ‘ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದನ್ನು ಸ್ಮರಿಸಿಕೊಂಡಿದ್ದಾರೆ.
ಕಾಮೇಗೌಡ ಅವರಂತಹ, ಬೆಲೆ ಕಟ್ಟಲಾಗದ ಪರಿಸರ ಕಾಳಜಿಯುಳ್ಳವರ ಸಂತತಿ ಇನ್ನೂ ಹೆಚ್ಚಾಗಲಿ ಎಂದು ಅಶಿಸುವುದಾಗಿ ತಿಳಿಸಿದ್ದಾರೆ.