ಜನ್ಮದಾತೆಯ ಮೇಲೆ ಅನ್ಯಾಯ: ಸಿಟ್ಟಿಗೆದ್ದ ಮಗಳು: ನಾಲ್ಕು ಬೀಗರನ್ನೇ ಹತ್ಯೆ ಮಾಡಿದ ಕಿರಾತಕರು: ಸೇಡಿಗೆ ಸೇಡೆಂದು ಗುಡುಗಿದ ದುಃಖತಪ್ತರು
ರಾಯಚೂರು: ಅಕ್ಕಪಕ್ಕದ ಮನೆಯ ಹುಡುಗ-ಹುಡುಗಿ ಪ್ರೇಮಿಸಿ ಆರೇಳು ತಿಂಗಳ ಹಿಂದೆ ಮದುವೆಯಾಗಿದ್ದರು. ಅದಾದ ನಂತರ ಗಂಡನ ಮನೆಯಲ್ಲೇ ಇದ್ದ ಯುವತಿ, ತವರೂರಲ್ಲಿ ತಾಯಿಗೆ ಅನ್ಯಾಯವಾಗುತ್ತಿದೆ ಎಂದು ಪ್ರಶ್ನಿಸಲು ಹೋಗಿದ್ದನ್ನೇ ನೆಪ ಮಾಡಿಕೊಂಡು ಹುಡುಗನ ಮನೆಯ ನಾಲ್ವರನ್ನ ಹತ್ಯೆಗೈದ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದ ಸುಖಾಲಪೇಟೆಯಲ್ಲಿ ನಡೆದಿದೆ.
ಮಂಜುಳಾನ ಪಕ್ಕದ ಮನೆಯ ಮೌನೇಶ ಲಾಕ್ಡೌನ್ ಪೂರ್ವದಲ್ಲೇ ಮದುವೆಯಾಗಿದ್ದರು. ಇದಾದ ನಂತರ ಎರಡು ಕುಟುಂಬದಲ್ಲಿ ವಿರಸ ಮುಂದುವರದೇಯಿತ್ತು. ಆದ್ರೇ, ಇಂದು ಇಳಿಸಂಜೆ ತನ್ನ ತಾಯಿಗೆ ಬಡಿಯಲಾಗುತ್ತಿದೆ ಎಂದು ತನ್ನ ಮಲತಾಯಿಯನ್ನ ಪ್ರಶ್ನಿಸಲು ಮಂಜುಳಾ ಮನೆಗೆ ಹೋಗಿದ್ದಳು. ಇದನ್ನೇ ನೆಪ ಮಾಡಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಮೌನೇಶನ ಕುಟುಂಬದ ಸಾವಿತ್ರಮ್ಮ, ಶ್ರೀದೇವಿ, ಹನುಮೇಶ ಮತ್ತು ನಾಗರಾಜ್ ಎಂಬಾತರನ್ನ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ.
ಅಮಾನವೀಯ ರೀತಿಯಲ್ಲಿ ಘಟನೆ ನಡೆದಿದ್ದು ನಾಲ್ವರ ದೇಹಗಳು ಮನೆಯಂಗಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿವೆ. ಘಟನೆಯಲ್ಲಿ ಈರಪ್ಪ, ರೇವತಿ ಹಾಗೂ ತಾಯಮ್ಮ ಕೂಡಾ ಗಾಯಗೊಂಡಿದ್ದಾರೆ.
ಒಂದು ಕೋಮಿನ ಜನರಾಗಿದ್ದರು ಹೀಗೆ ಬಡಿದಾಡಿಕೊಂಡಿದ್ದಾರೆ. ರಾಕ್ಷಸ ಪ್ರವೃತ್ತಿ ಮೆರೆಯಲಾಗಿದೆ. ಈಗಾಗಲೇ ಸಿಂಧನೂರು ಶಹರ ಠಾಣೆಯ ಪೊಲೀಸರು ಮೂವರನ್ನ ವಶಕ್ಕೆ ಪಡೆದಿದ್ದು, ವಿಚಾರಣೆಯನ್ನ ತೀವ್ರಗೊಳಿಸಿದ್ದಾರೆ.