ಹತ್ಯೆಯಾದವರ ಅಂತ್ಯಕ್ರಿಯೆಯಲ್ಲಿ ಜನಜಾತ್ರೆ: ಕೊರೋನಾ ಸೋಂಕು ಹರಡುವ ಭಯ
ರಾಯಚೂರು: ಪ್ರೀತಿಸಿ ಮದುವೆಯಾಗಿ ತಾಯಿಯ ನೋವನ್ನ ಕೇಳಲು ಹೋಗಿದ್ದನ್ನೇ ನೆಪ ಮಾಡಿಕೊಂಡು ನಡೆದಿದ್ದ ಐವರ ಕೊಲೆ ಪ್ರಕರಣದ ಅಂತ್ಯಸಂಸ್ಕಾರ ಒಂದೇ “ಕುಣಿ”ಯಲ್ಲಿ ನಡೆದಿದ್ದು, ಹತ್ಯೆಯಾದವರ ಅಂತ್ಯ ಸಂಸ್ಕಾರಕ್ಕೆ ಜನಜಾತ್ರೆ ಸೇರಿತ್ತು.
ಅಂತ್ಯ ಸಂಸ್ಕಾರದ ವೇಳೆ ಕೋವಿಡ್ ನಿಯಮ ಉಲ್ಲಂಘನೆ. ನಿಯಮದ ಪ್ರಕಾರ ಮೃತಪಟ್ಟವರ ರಕ್ತ ಸಂಬಂಧಿಗಳು ಸೇರಿ 20 ಜನ ಮಾತ್ರ ಭಾಗವಹಿಸಬೇಕು. ಆದರೆ, ಸಿಂಧನೂರ ಪಟ್ಟಣದಲ್ಲಿ ನಡೆದ ಸಾಮೂಹಿಕ ಅಂತ್ಯಸಂಸ್ಕಾರದಲ್ಲಿ 400ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.
ಅಂತ್ಯಕ್ರಿಯೆಯಲ್ಲಿ ಭಾಗಿಯಾದವರಲ್ಲಿ ನೂರಾರು ಜನ ಮಾಸ್ಕ ಕೂಡ ಧರಿಸಿರಲಿಲ್ಲ. ಇನ್ನು ಸಾಮಾಜಿಕ ಅಂತರವಂತೂ ಸಂಪೂರ್ಣವಾಗಿ ಉಲ್ಲಂಘಿಸಲಾಗಿತ್ತು. ನಿನ್ನೆಯಷ್ಟೆ ಸಿಂಧನೂರಿನಲ್ಲಿ 25 ಜನರಿಗೆ ಕೊರೋನಾ ವೈರಸ್ ವಕ್ಕರಿಸಿತ್ತು.
ನಿತ್ಯವೂ ಸಿಂಧನೂರ ತಾಲೂಕಿನಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ನಿನ್ನೆ ನಡೆದ ಅಂತ್ಯ ಸಂಸ್ಕಾರದಲ್ಲಿ ನೂರಾರು ಜನ ಭಾಗವಹಿಸಿದ್ದು ವೈರಸ್ ಹರಡಲು ದಾರಿ ಮಾಡಿ ಕೊಟ್ಟಂತಾಗಿದೆ.
ರಾಯಚೂರ ಜಿಲ್ಲೆಯ ಸಿಂಧನೂರ ಪಟ್ಟಣದ ಸುಕಾಲಪೇಟೆ ಬಡಾವಣೆಯಲ್ಲಿ ಶನಿವಾರ ಸಂಜೆ ಒಂದೇ ಕುಟುಂಬದ ಐವರ ಬರ್ಬರ ಹತ್ಯೆ ನಡೆದಿತ್ತು.