ಕಾಂಡೋಮ್ ತಯಾರಿಸೋ ಕಂಪನಿಯಿಂದ ವೆಂಟಿಲೇಟರ್ ಖರೀದಿ: ಗೃಹ ಸಚಿವರ ಸಂಬಂಧಿಯೂ ಭಾಗಿ…!

ಮೈಸೂರು: ಕಾಂಡೋಮ್ ಕಂಪನಿಯಲ್ಲಿ ವೆಂಟಿಲೇಟರ್‌ನ್ನ ರಾಜ್ಯ ಸರ್ಕಾರ ಖರೀದಿಸಿದೆ. ಹೆಚ್‌ಎಲ್‌ಎಲ್‌ಆರ್ ಕಂಪನಿ ಕಾಂಡೋಮ್ ತಯಾರಿಸುತ್ತದೆ. ಈಗ ಅದೇ ಕಂಪನಿಯಿಂದ ವೆಂಟಿಲೇಟರ್ ಖರೀದಿ ಮಾಡಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ ಆರೋಪಿಸಿದ್ದಾರೆ.
HLLR ಕಂಪನಿ ಕೇರಳದ ತಿರುವನಂತಪುರನದ್ದು. ಅದು ಕಳೆದ ಐವತ್ತು ವರ್ಷಗಳಿಂದ ಕಾಂಡೋಮ್ ತಯಾರಿಸುತ್ತ ಬಂದಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವತ್ ನಾರಾಯಣ್ ವೆಂಟಿಲೇಟರ್ ಖರೀದಿ ವಿಚಾರದಲ್ಲಿ ಅವ್ಯವಹಾರ ನಡೆಸಿದ್ದಾರೆಂದು ದೂರಿದರು.
ಕಿದ್ವಾಯಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಮಂಜುನಾಥ್ ಅವರ ಒಡೆತನದ ಮಂಜುನಾಥ್ ಎಂಟರ್ ಪ್ರೈಸಸ್‌ನಿಂದ ಕೆಲ ಉಪಕರಣಗಳನ್ನ ಸರ್ಕಾರ ಖರೀದಿಸಿದೆ. ಮಂಜುನಾಥ್ ಗೃಹ ಸಚಿವರ ಸಂಬಂಧಿಯಾಗಿದ್ದಾರೆಂದು ಲಕ್ಷ್ಮಣ ಆರೋಪಿದರು.
ಸಾಮಗ್ರಿ ಖರೀದಿಯಲ್ಲಿ ಅಶ್ವತ್ ನಾರಾಯಣ್ ಒಡೆತನದ ಪದ್ಮಶ್ರೀ ಡಯಾಗ್ನಸ್ಟಿಕ್ ಸೆಂಟರ್ ನ ಪಾತ್ರವೇನು ಎಂದು ಪ್ರಶ್ನಿಸಿದ ವಕ್ತಾರರು, ಬೆಂಗಳೂರು ಉಸ್ತುವಾರಿ ಹೊತ್ತಿರುವ ಐದು ಜನ ಮಂತ್ರಿಗಳು ಸಾಮಗ್ರಿ ಖರೀದಿ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ನೇರವಾಗಿ ಆರೋಪಿಸಿದರು.
ಸಾಮಗ್ರಿಗಳ ಖರೀದಿಯಲ್ಲಿ ಆರು ಇಲಾಖೆ ಭಾಗಿಯಾಗಿವೆ. ಬೆಡ್ ಗಳ ಬಾಡಿಗೆ ವಿಚಾರದಲ್ಲಿ 240 ಕೋಟಿ ನೀಡಿದೆ. ಕೊರೋನಾ ತಡೆಗಟ್ಟುವ ಸಲುವಾಗಿ ಸಾಮಗ್ರಿಗಳ ಖರೀದಿ ವಿಚಾರದಲ್ಲಿ ಸಮಗ್ರ ತನಿಖೆಯಾಗಬೇಕೆಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಒತ್ತಾಯಿಸಿದರು.