ಕೊರೋನಾ ಸೋಂಕಿತರಿಗೆ ಹೂಮಳೆ ಸುರಿಸಿದ ಸಿಬ್ಬಂದಿಗಳು: ಬರ್ತಡೇ ದಿನವೇ ಸೇವೆಗೆ ಹಾಜರಾದ ಟ್ರಾಫಿಕ್ ಹವಾಲ್ದಾರ
ಧಾರವಾಡ: ಸಂಚಾರಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೇ ಕೊರೋನಾ ಸೋಂಕಿಗೆ ಒಳಗಾಗಿದ್ದ ಹವಾಲ್ದಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ತಮ್ಮ ಹುಟ್ಟುಹಬ್ಬದ ದಿನವೇ ಮತ್ತೆ ಸೇವೆಗೆ ಮರಳಿದ ಅಪರೂಪದ ಘಟನೆ ಇಂದು ನಡೆಯಿತು.
ಸಂಚಾರಿ ಠಾಣೆಯ ಹವಾಲ್ದಾರ್ ಡಿ.ವಿ.ಗಾಳರೆಡ್ಡಿ ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಆದರೆ, ಯಾವುದೇ ರೀತಿಯ ಭಯ ಬೀಳದೇ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಗುಣಮುಖರಾದ ಕೆಲವೇ ದಿನಗಳಲ್ಲಿ ಮತ್ತೆ ಸೇವೆಗೆ ಮರಳಿದರು.
ಸೇವೆಗೆ ಮರಳಿದ ಸಮಯದಲ್ಲಿ ಠಾಣೆಯ ಮುಂಭಾಗದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಆಶೀರ್ವಾದ ಪಡೆದ ಗಾಳರೆಡ್ಡಿಯವರಿಗೆ ಇನ್ಸ್ ಪೆಕ್ಟರ್ ಎಂ.ಎಸ್.ನಾಯ್ಕರ ಶಾಲು ಹಾಕಿ ಸತ್ಕರಿಸಿದರು. ಎಎಸೈ ಬಳ್ಳಾರಿ, ಎಎಸೈ ಎಸ್.ಬಿ.ಶಿಂಧೆ, ಎಎಸೈ ಬಿ.ಎಸ್.ಕುರಿ ಸೇರಿದಂತೆ ಠಾಣೆಯ ಬಹುತೇಕ ಸಿಬ್ಬಂದಿಗಳು ಸೋಂಕಿನಿಂದ ಪಾರಾಗಿ ಬಂದವರಿಗೆ ಹೂಮಳೆ ಸುರಿಸಿ ಅಭಿನಂದನೆ ಸಲ್ಲಿಸಿದರು.
ಕೊರೋನಾ ವಾರಿಯರ್ ಕೂಡಾ ಆಗಿರುವ ಗಾಳರೆಡ್ಡಿ ಇವತ್ತು ಹುಟ್ಟುಹಬ್ಬವನ್ನ ಆಚರಿಸುವ ಕೊಳ್ಳುವ ಜೊತೆಗೆ ಸೇವೆಗೂ ಹಾಜರಾಗಿದ್ದಾರೆ. ಇಂಥವರಿಗೆ ನಾವೂ ಕೂಡಾ ಗುಡ್ ಲಕ್ ಹೇಳೋಣವಲ್ಲವೇ..