ನಾಗರಳ್ಳಿ ಎಂ.ಎಸ್.ಕರಿಯಿಂದ ಗುಂಡಿನ ದಾಳಿ- ದಲಿತ ಯುವಕನ ಸ್ಥಿತಿ ಅಯೋಮಯ
ನವಲಗುಂದ: ಹಣದ ಮದದಲ್ಲಿರುವ ಜನರು ಏನೂ ಮಾಡಿದರೂ ನಡೆಯತ್ತೆ ಎಂದುಕೊಂಡಂತೆ ವರ್ತಿಸಿರುವ ಪರಿಣಾಮ ಬಡ ದಲಿತರ ಯುವಕ ಜೀವನ್ಮರಣದ ನಡುವೆ ಹೋರಾಟ ಮಾಡುವ ಸ್ಥಿತಿ ಬಂದೋದಗಿದೆ.
ತಾಲೂಕಿನ ಬೆಳಾರ ಬಳಿಯ ನಾಗರಳ್ಳಿ ಗ್ರಾಮದಲ್ಲಿ ಶರಣಪ್ಪ ಕಾಳೆಯ ಮೇಲೆ ಗುಂಡಿನ ದಾಳಿಯಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನಿಗೆ ಐಸಿಯುನಲ್ಲಿ ಉಪಚಾರ ನಡೆದಿದೆ.
*ಆಗಿದ್ದೇನು ಗೊತ್ತಾ*
ನಾಗರಳ್ಳಿ ಗ್ರಾಮದ ಪೈನಾನ್ಸಿಯರ್ ಎಂ.ಎಸ್.ಕರಿ ಅಲಿಯಾಸ್ ಮಲ್ಲಪ್ಪ ಕರಿ ಬೆಳಗ್ಗೆ ತಮ್ಮೂರಿನ ಶರಣಬಸವೇಶ್ವರ ಮಠದ ಬಳಿ ನಿಂತಿದ್ದ ನಾಗಪ್ಪ ಹರ್ತಿಯೊಂದಿಗೆ ಜಗಳವಾಡಿಕೊಂಡಿದ್ದಾನೆ. ಇದಾದ ಕೆಲವು ಸಮಯದ ನಂತರ ಹರ್ತಿ ನಾಗಪ್ಪ ನವಲಗುಂದಕ್ಕೆ ಕೆಸಲದ ನಿಮಿತ್ತ ತೆರಳಿದ್ದಾರೆ. ಇಷ್ಟಕ್ಕೆ ಸುಮ್ಮನಿರದ ಮಲ್ಲಪ್ಪ ಕರಿ ಕಡೆಯವರು, ನಾಗಪ್ಪ ಹರ್ತಿಯನ್ನ ಹೊಡೆಯಲು ಹುಡುಕಾಡಿದ್ದಾರೆ. ಈ ವಿಷಯ ಹರ್ತಿ ಮನೆಯವರಿಗೆ ತಿಳಿದು, ಸಂಜೆ ಮಲ್ಲಪ್ಪ ಕರಿ ಮನೆಗೆ ಕೇಳಲು ಹೋಗಿದ್ದಾರೆ.
ಮೊದ ಮೊದಲು ಸರಿಯಾಗಿಯೇ ಮಾತನಾಡಿ ನಂತರ ಲೈಸನ್ಸ್ ರಿವಾಲ್ವರ ತೆಗೆದು ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ. ಅದೇ ಸಮಯದಲ್ಲಿ ಮನೆಯತ್ತ ತೆರಳುತ್ತಿದ್ದ ಅಮಾಯಕ ಶರಣಪ್ಪ ಕಾಳೆಯ ಹೊಟ್ಟೆಯನ್ನ ಗುಂಡು ಸೀಳಿದೆ.
ಇದೇ ಸಮಯದಲ್ಲಿ ಎರಡು ಕಡೆಯ ಕೆಲವರಿಗೆ ಗಾಯಗಳಾಗಿದ್ದು, ಗ್ರಾಮದಲ್ಲಿ ನೆಮ್ಮದಿ ಮಾಯವಾಗಿದೆ. ಹಣವಿದ್ದವರ ಮದವೇ ಇಂತಹದಕ್ಕೆ ಕಾರಣವಾಗಿದೆ.
ನಾಗರಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ, ಹೆಚ್ಚಿನ ಪೊಲೀಸ್ ಕಾವಲು ಹಾಕಲಾಗಿದೆ.