ಇಂದಿನಿಂದ 24 ಗಂಟೆಯೂ ಬಸ್ ರೈಟ್.. ರೈಟ್.. – ಕೊರೋನಾ ಇದ್ರೇನು.. ಬಿಟ್ರೇನು…!
ಹುಬ್ಬಳ್ಳಿ: ಕೊರೋನಾ ವೈರಾಣು ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಜಾರಿಗೊಳಿಸಿದ್ದ ವಾರದ ಆರು ದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗಿನ ಭಾಗಶ ಲಾಕ್ ಡೌನ್ ಹಾಗೂ ರವಿವಾರದ ಸಂಪೂರ್ಣ ಲಾಕ್ ಡೌನ್ ತೆರವುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯ ಎಲ್ಲ ಘಟಕಗಳಿಂದ ಹಾಗೂ ಬಸ್ ನಿಲ್ದಾಣಗಳಿಂದ ದಿನದ 24 ಗಂಟೆಯೂ ಬಸ್ಸುಗಳು ಸಂಚರಿಸಲಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಶುಕ್ರವಾರದ ವರೆಗೆ ಲಾಕ್ ಡೌನ್ ನಿರ್ಬಂಧಗಳ ಪ್ರಕಾರ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಸಾರಿಗೆ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಬಸ್ ನಿಲ್ದಾಣಗಳಿಂದ 8 ಗಂಟೆಗೆ ಕೊನೆಯ ಬಸ್ ಹೊರಡುತ್ತಿತ್ತು. ಇದೀಗ ಲಾಕ್ ಡೌನ್ ತೆರವುಗೊಳಿಸಿದ್ದರಿಂದಾಗಿ ಹಗಲು-ರಾತ್ರಿಯೆನ್ನದೇ ದಿನದ 24 ಗಂಟೆಯೂ ಬಸ್ಸುಗಳು ಸಂಚರಿಸಲಿವೆ.
ಕೋವಿಡ್-19 ಮಾರ್ಗದರ್ಶಿ ಸೂಚನೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಮುಂದುವರೆಯುತ್ತದೆ. ಮಾಸ್ಕ್ ಧರಿಸದ ಪ್ರಯಾಣಿಕರಿಗೆ ಬಸ್ ನಿಲ್ದಾಣ ಮತ್ತು ಬಸ್ಸಿನಲ್ಲಿ ಪ್ರವೇಶಿಸಲು ಅನುಮತಿಸುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವೇಗದೂತ ಬಸ್ಸುಗಳಲ್ಲಿ 30, ರಾಜಹಂಸ ಹಾಗೂ ಸ್ಲೀಪರ್ ಬಸ್ಸುಗಳಲ್ಲಿ 20 ಮತ್ತು ವೋಲ್ವೋ ಬಸ್ಸುಗಳಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.