ಪ್ರೂಟ್ ಇರ್ಫಾನ್ ಶವ ಕಿಮ್ಸ್ ಗೆ ರವಾನೆ: ನಡೆಯಲಿದೆ ಮರಣೋತ್ತರ ಪರೀಕ್ಷೆ
ಹುಬ್ಬಳ್ಳಿ: ಮಗನ ಮದುವೆಯ ಸಂಭ್ರಮ ಮುಗಿಸಿ ಹಾಲ್ ಹೊರಗಡೆ ನಿಂತಿದ್ದ ರೌಡಿಷೀಟರ್ ಪ್ರೂಟ್ ಇರ್ಫಾನ್ ಅಲಿಯಾಸ್ ಸಯ್ಯದ ಇರ್ಫಾನ್ ಶವ ಮರಣೋತ್ತರ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆಯಿಂದ ಕಿಮ್ಸ್ ಗೆ ರವಾನೆಯಾಯಿತು.
ಮಧ್ಯರಾತ್ರಿ ಹನ್ನೆರಡರ ನಂತರ ಚಿಕಿತ್ಸೆ ಫಲಿಸದೇ ಮೃತಪಟ್ಟ ಇರ್ಫಾನ್ ಶವವನ್ನ ಬೆಳಗಿನವರೆಗೆ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿತ್ತು. ಈಗಷ್ಟೇ ಶವವನ್ನ ಹಿರಿಯ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಿಮ್ಸ್ ಗೆ ಸ್ಥಳಾಂತರ ಮಾಡಲಾಯಿತು.
ಪ್ರೂಟ್ ಇರ್ಫಾನ್ ಗೆ ಒಟ್ಟು ಮೂರು ಗುಂಡುಗಳು ತಗುಲಿದ್ದು, ಅದರಲ್ಲಿ ಒಂದು ತಲೆಯಲ್ಲೇ ಉಳಿದಿದ್ದರಿಂದ ಚಿಕಿತ್ಸೆ ಫಲಿಸಿಲ್ಲ ಎನ್ನಲಾಗಿದೆ. ಇನ್ನೊಂದು ಗುಂಡು ಚಪ್ಪೆಗೆ ಮತ್ತೊಂದು ಗುಂಡು ಮೊಣಕಾಲಿಗೆ ಬಿದ್ದಿತ್ತು ಎಂಬುದು ತಿಳಿದು ಬಂದಿದೆ.
ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ರಾತ್ರಿಯಿಂದಲೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಶವವನ್ನೂ ಕೂಡಾ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲೇ ಕಿಮ್ಸ್ ಗೆ ತೆಗೆದುಕೊಂಡು ಹೋಗಲಾಗಿದೆ.
ಇನ್ನೂ ಕೆಲವು ಸಮಯದಲ್ಲಿ ಮರಣೋತ್ತರ ಪರೀ್ಕ್ಷೆ ನಡೆಯಲಿದ್ದು, ನಂತರ ಶವವನ್ನ ಎಲ್ಲಿಗೆ ತೆಗೆದುಕೊಂಡು ಹೋಗುತ್ತಾರೆಂಬುದು ತಿಳಿಯಲಿದೆ.