ಸೋರುತಿಹದು ಮನೆಯ ಮಾಳಿಗೆ.. ಅಜ್ಞಾನದಿಂದಲ್ಲ.. ಮಳೆಯಿಂದ..! ಹೋಗಿ ನೋಡಿ ಜನಪ್ರತಿನಿಧಿಗಳೇ..
ಕುಂದಗೋಳ: ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮನೆಗಳು ಸೋರುತ್ತಿದ್ದು, ಒಂದಿಷ್ಟು ಮನೆಗಳಿಗೆ ನೀರು ನುಗ್ಗಿ ಜೀವನವೇ ದುಸ್ತರವಾದ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿನ ಫಕ್ಕೀರಗೌಡ ಸಂಶಿ, ವಾಸಪ್ಪ ಮಲ್ಲಿಗವಾಡ, ಫಕ್ಕೀರಪ್ಪ ಸಂಶಿ ಸೇರಿದಂತೆ ಗ್ರಾಮದ ಬಹುತೇಕ ಮನೆಗಳಲ್ಲಿ ನೀರು ಜೀನಗುಡುತ್ತಿದೆ. ಇದರಿಂದ ಮಲಗುವುದಕ್ಕೂ ಆಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮನೆಯೊಳಗೆ ಬಂದಿರುವ ನೀರನ್ನ ಮೋಟಾರ್ ಹಚ್ಚಿ ಹೊರಗೆ ಬಿಡಲಾಗುತ್ತಿದ್ದು, ಹಳೆಯ ಕಾಲದ ಮನೆಗಳ ಗೋಡೆಗಳು ಬೀಳುವ ಸ್ಥಿತಿಗೆ ಬಂದಿವೆ. ಮನೆಯ ಒಳಗಡೆ ಮಲಗಲು ಜಾಗ ಮಾಡಿಕೊಳ್ಳಲು ಚೀಲಗಳನ್ನ ಕಟ್ಟಿ ನೀರು ಒಂದೇ ಕಡೆ ಬೀಳುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಶಾಸಕಿ ಕುಸುಮಾವತಿ ಶಿವಳ್ಳಿಯವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ವ್ಯವಸ್ಥೆಯನ್ನ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕಿದೆ. ಬಡವರ ನೋವಿಗೆ ಸ್ಪಂಧಿಸಬೇಕಿದೆ.
                      
                      
                      
                      
                      
                        