ಕೊರೋನಾ ಸೋಂಕಿತರ ಮನೆಗೆ ಶಿಕ್ಷಕರು: ಹೊಸ ಗಂಡಾಂತರಕ್ಕೆ ಮುನ್ನುಡಿ..? ಶಿಕ್ಷಕರ ಜೀವಕ್ಕೆ ಬೆಲೆಯಿಲ್ಲವೇ..?
ಧಾರವಾಡ: ಕೊರೋನಾ ಸಮಯದಲ್ಲಿ ದಿನಕ್ಕೊಂದು ತೀರ್ಮಾನ ತೆಗೆದುಕೊಳ್ಳುವುದರಲ್ಲಿ ಸೈ ಎನಿಸಿಕೊಂಡಿರುವ ಶಿಕ್ಷಣ ಇಲಾಖೆಯೀಗ ಹೊಸದೊಂದು ತಂತ್ರ ಬಳಕೆ ಮಾಡಲು ಮುಂದಾಗಿದ್ದು, ಕೊರೋನಾ ಪಾಸಿಟಿವ್ ಬಂದವರ ಮನೆ ಮನೆಗೆ ಶಿಕ್ಷಕರನ್ನ ಕಳಿಸಲು ಮುಂದಾಗಿದೆ.
ಮಕ್ಕಳಿಗೆ ಶಿಕ್ಷಣ ಕೊಡಲು ವಿದ್ಯಾಗಮ ಯೋಜನೆ ಆರಂಭಿಸಿ, ಇನ್ನೂ ಕೆಲವೇ ದಿನಗಳು ನಡೆದಿಲ್ಲ. ಅಷ್ಟರಲ್ಲಿ ಕೊರೋನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರ ಮಾಹಿತಿ ಪಡೆಯಲು ಸೋಂಕಿತರ ಮನೆಗೆ ಶಿಕ್ಷಕರನ್ನ ಕಳಿಸಲು ಇಲಾಖೆ ಮುಂದಾಗಿದೆ.
ಒಂದು ದಿನ ಸೋಂಕಿತರ ಮನೆಗೆ ಹೋಗಿ ಮರುದಿನ ಮಕ್ಕಳಿಗೆ ಅಭ್ಯಾಸ ಹೇಳಲು ವಿದ್ಯಾಗಮ ಯೋಜನೆಯಲ್ಲಿ ಭಾಗವಹಿಸಬೇಕಂತೆ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮುನ್ನಚ್ಚರಿಕೆ ವಸ್ತುಗಳನ್ನೂ ನೀಡೋದಿಲ್ಲ ಎಂದು ಇಲಾಖೆ ಸ್ಪಷ್ಟವಾಗಿ ಹೇಳಿದೆಯಂತೆ.
ಶಿಕ್ಷಣ ಇಲಾಖೆಯ ತೀರ್ಮಾನಗಳು ಶಿಕ್ಷಕರ ವಿರುದ್ಧವಾಗಿಯೂ ಮಕ್ಕಳ ವಿರುದ್ಧವಾಗಿಯೂ ನಡೆಯುತ್ತಿವೆ ಎಂಬ ಭಾವನೆ ಹಲವರಲ್ಲಿ ಮೂಡುತ್ತಿದೆ. ಸೋಂಕಿತರ ಮನೆಗೆ ಹೋದಾಗ ಅವರಾಗಲೇ ಕ್ವಾರಂಟೈನ್ ದಲ್ಲಿ ಇರುತ್ತಾರೆ. ಅವರಿಂದ ಮಾಹಿತಿಯನ್ನ ಪಡೆಯುವುದು ಹೇಗೆ..? ಅವರ ಮನೆಗೆ ಸೀಲ್ ಡೌನ್ ಮಾಡಿರುತ್ತಾರೆ ಅಲ್ಲಿ ಹೋಗುವುದು ಹೇಗೆ..? ಹೋಗುವ ಶಿಕ್ಷಕರ ಆರೋಗ್ಯ ಕಾಪಾಡುವುದಕ್ಕೆ ಏನು ಕೊಡುತ್ತಿದ್ದೀರಿ..? ಇಂತಹ ಯಾವುದೇ ಪ್ರಶ್ನೆಗೆ ಉತ್ತರವಿಲ್ಲ.
“ಕ್ವಾರಂಟೈನ್ ವಾಚ್” ಬಳಕೆ ಮಾಡಿ ಮಾಹಿತಿ ಕೊಡಬೇಕು. ನೀವು ದಿನಾನೂ ಎಷ್ಟು ಹೆಚ್ಚು ಮಾಹಿತಿಯನ್ನ ಕೊಡುತ್ತಿರೋ ಅಷ್ಟು ನಮ್ಮ ಜಿಲ್ಲೆ ಮುಂದೆ ಬರತ್ತೆ ಎಂದು ಹೇಳುತ್ತಿದ್ದಾರೋ ಹೊರತಾಗಿ, ಮೇಲಿನ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗುತ್ತಿಲ್ಲ.
ಶಿಕ್ಷಣ ಇಲಾಖೆ ಕೊನೆಪಕ್ಷ ವಿದ್ಯಾಗಮ ಯೋಜನೆಯನ್ನಾದರೂ ಬಂದ್ ಮಾಡಿ ಇದನ್ನಾದರೂ ಮಾಡಿಸಬೇಕು. ಇಲ್ಲದಿದ್ದರೇ ಶಿಕ್ಷಕರಿಂದ ಮಕ್ಕಳಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಬಹುದೆಂಬ ಭಯ ಬಹುತೇಕರಲ್ಲಿ ಕಾಡುತ್ತಿದೆ. ಶಿಕ್ಷಣ ಸಚಿವರೇ ಇದಕ್ಕೇಲ್ಲ ಉತ್ತರ ನೀಡಬೇಕಷ್ಟೇ..!