ಬಾಂಬಿಟ್ಟು ಖೈದಿಯಾಗಿದ್ದ, ವೀರಪ್ಪನ್ ಸಹಚರ ಇವತ್ತೇನಾದ ಗೊತ್ತಾ..!
ಮೈಸೂರು: ಕೇಂದ್ರ ಕಾರಾಗೃಹದಲ್ಲಿ ಕಾಡುಗಳ್ಳ, ದಂತಚೋರ ವೀರಪ್ಪನ ಸಹಚರ ಬಿಲವೇಂದ್ರನ್ ಆರೋಗ್ಯ ಏರುಪೇರಾಗಿ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ತಡರಾತ್ರಿ ನಡೆದಿದೆ.
ಮಲೆಮಹದೇಶ್ವರ ಸಮೀಪದ ಮಾರ್ಟಳ್ಳಿ ಮೂಲದ ಬಿಲವೇಂದ್ರನ್, ಕಳೆದ 28 ವರ್ಷಗಳಿಂದಲೂ ಕಾರಾಗೃಹದಲ್ಲಿ ಬಂಧಿತನಾಗಿದ್ದ. ಕಳೆದ ಹತ್ತು ದಿನಗಳ ಹಿಂದೆ ಜೈಲಿನಲ್ಲಿ ಪ್ರಜ್ಞಾಶೂನ್ಯನಾಗಿದ್ದ ಈತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ನರ ಸಂಬಂಧಿ ಸಮಸ್ಯೆಗಳಿಂದಾಗಿ ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಬಿಲವೇಂದ್ರನ್, ಚಾಮರಾಜನಗರ ಜಿಲ್ಲೆಯ ಗಡಿಭಾಗದ ಪಾಲಾರ್ ಸಮೀಪದ ಸೋರೆಕಾಯಿಮಡುವು ಬಳಿ ನೆಲಬಾಂಬ್ ಸ್ಪೋಟಿಸಿ 22 ಮಂದಿ ಸಾವಿಗೆ ಕಾರಣವಾಗಿದ್ದರಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಈತನಿಗೆ, ಶಿಕ್ಷೆಯ ಪ್ರಮಾಣವನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು.
ಕಾಡುಗಳ್ಳನ ಜೊತೆಗೆ ದಶಕಗಳ ಕಾಲ ಕಳೆದಿದ್ದ ಬಿಲವೇಂದ್ರನ್ ಇಂದು ಇಲ್ಲವಾಗಿದ್ದಾನೆ.