ಅಪಹರಣವಲ್ಲವದು ‘ಏಕ್ ದೂ ಜೇ ಕೇಲಿಯೇ’ ಪ್ರಕರಣ: ಮರೇವಾಡ ಬಸಮ್ಮ ಲವ್ಸ್ ಮಡ್ಡಿಗಿರಿಯಾಲ ಗಂಗಪ್ಪ

ಧಾರವಾಡ: ಕಳೆದು ಹೋದ ಮಗಳನ್ನ ಹುಡುಕಿ ಕೊಡಿ ಎಂದು ಬೇಡಿಕೊಂಡು ಪೊಲೀಸ್ ಠಾಣೆಯ ಮುಂದೆ ತಂದೆಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೇರೆ ಸ್ವರೂಪವನ್ನ ಪಡೆದಿದ್ದು, ನನ್ನದು ಅಪಹರಣವಾಗಿಲ್ಲ. ನಾನೂ ಪ್ರೀತಿಸಿ ಆತನೊಂದಿಗೆ ಹೋಗಿದ್ದೇನೆ ಎಂದು ಮಗಳು ಹೇಳಿದ್ದಾಳೆ.
ಧಾರವಾಡ ತಾಲೂಕಿನ ಮುದ್ದಪ್ಪ ಜಂಗಳಿ ಎಂಬುವವರ ಮಗಳು ಬಸಮ್ಮ ಕೆಲವು ದಿನಗಳಿಂದ ನಾಪತ್ತೆಯಾಗಿದ್ದಳು. ಅದೇ ಕಾರಣಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಡ್ಡಿಗಿರಿಯಾಲ ಗ್ರಾಮದ ಗಂಗಪ್ಪ ಚುರಮರಿ ಎಂಬಾತನೇ ಅಪಹರಣ ಮಾಡಿದ್ದಾನೆಂದು ತಂದೆ ಹೇಳಿಕೊಂಡಿದ್ದರು. ಅದೇ ಕಾರಣಕ್ಕೆ ಪೊಲೀಸ್ ಠಾಣೆ ಎದುರು ದೊಡ್ಡದೊಂದು ರಾದ್ಧಾಂತ ನಡೆದಿತ್ತು.
ಈ ಘಟನೆ ನಡೆದ ತಕ್ಷಣವೇ ಪೊಲೀಸರು ಯುವತಿಯನ್ನ ಕರೆದುಕೊಂಡು ಬಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಬಸಮ್ಮಳ ಹೇಳಿಕೆಯನ್ನ ಪಡೆದರು. ನಾನೂ ಐದು ತಿಂಗಳ ಹಿಂದೇನೇ ಮನೆ ಬಿಟ್ಟು ಗಂಗಪ್ಪನೊಂದಿಗೆ ಜೀವನ ನಡೆಸಲು ಹೋಗಿದ್ದೇನೆಂದು ಹೇಳಿದ್ದಾಳೆ.
ಪ್ರೀತಿಯಿಂದ ಸಾಕಿದ ಮಗಳು ಪ್ರೀತಿಗಾಗಿ ಗಂಗಪ್ಪನ ಜೊತೆ ಹೋಗಿದ್ದು, ವಯಸ್ಸು ಆಕೆಗೀಗ ಸಾಥ್ ನೀಡಿದೆ. ಮಕ್ಕಳ ಪ್ರೀತಿಗಾಗಿ ಹಪಹಪಿಸುವ ಪಾಲಕರು ಜೋಲು ಮೊರೆ ಹಾಕಿಕೊಂಡು ಮನೆಯತ್ತ ಭಾರದ ಹೆಜ್ಜೆ ಹಾಕುತ್ತ ನಡೆದರು.