ಗುತ್ತಿಗೆದಾರನ ಕಿರುಕುಳ : ಮಹಾನಗರ ಪಾಲಿಕೆ ಮಹಿಳಾ ಸ್ವಚ್ಛತಾ ಸಿಬ್ಬಂದಿ ಆತ್ಮಹತ್ಯೆ ಯತ್ನ..

ಧಾರವಾಡ: ಗುತ್ತಿಗೆದಾರನ ಕಿರುಕುಳದಿಂದ ಬೇಸತ್ತು ಮಹಿಳಾ ಕಾರ್ಮಿಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದ ಜನ್ನತನಗರದಲ್ಲಿ ನಡೆದಿದೆ.
19ನೇ ವಾರ್ಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಕಾರ್ಮಿಕಳಾದ ಮಂಜುಳಾ ಮಾದರ ಎಂಬ ಮಹಿಳೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮನೆಯವರಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
19ನೇ ವಾರ್ಡಿನ ಗುತ್ತಿಗೆದಾರ ನರಸಿಂಹ ಸಗಬಾಲ್ ಎನ್ನುವವರ ಕಿರುಕುಳದಿಂದಲೇ ತಾವು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಮಂಜುಳಾ ಮಾದರ ಆರೋಪ ಮಾಡಿದ್ದು, ಪಿಎಫ್ ಹಣ ಕೊಟ್ಟಿಲ್ಲವೆಂದು ದೂರು ನೀಡಿದ್ದಕ್ಕೆ ತಮಗೆ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರ ಸ್ಥಿತಿ ಅಧೋಗತಿಗೆ ಹೋಗುತ್ತಿರುವುದಕ್ಕೆ ಗುತ್ತಿಗೆದಾರರೇ ಕಾರಣವೆಂಬ ಹಲವು ಆರೋಪಗಳು ಕೇಳಿ ಬರುತ್ತಿದ್ದವು. ಇದೀಗ ಇಂತಹ ದೂರಿಗೆ ಘಟನೆಯೊಂದು ಸಾಕ್ಷಿಯಾಗಿದೆ.
ವಿಷ ಸೇವಿಸಿದ ಪ್ರಕರಣದ ಬಗ್ಗೆ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.