ಸಿಎಂ ‘BSY’ ಬರಿಗೈಲಿ: ಇದು ಅವರನ್ನ ಬದಲಾವಣೆ ಮಾಡೋ ಮುನ್ಸೂಚನೆ

ತುಮಕೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಮಂತ್ರಿ ಮಂಡಲದ ವಿಸ್ತರಣೆ ಕುರಿತು ಹೋಗಿದ್ದು, ಖಾಲಿ ಕೈಲಿ ಬಂದಿರೋದನ್ನ ನೋಡಿದ್ರೇ, ಇದು ಅವರನ್ನ ಬದಲಾವಣೆ ಮಾಡುವ ಮುನ್ಸೂಚನೆ ಎಂದು ಮಾಜಿ ಶಾಸಕ ಹಾಗೂ ಹಾಲಿ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ತುಮಕೂರು ನಗರದ ಗುಂಚಿ ಚೌಕದಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಮಾತನಾಡಿದ ರಾಜಣ್ಣ, ರಾಜ್ಯದಲ್ಲಿ ಯಡಿಯೂರಪ್ಪ ಯುಗ ಅಂತ್ಯವಾಗುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೆಗೆದುಕೊಂಡು ಹೋದ ಲಿಸ್ಟ್ ನಲ್ಲಿ ಏನೇ ಮಾಡಿಯಾದರೂ ಗ್ರೀನ್ ಸಿಗ್ನಲ್ ಕೊಟ್ಟು ಕಳಿಸಬೇಕಾಗಿತ್ತು. ಆದರೆ, ಹಾಗಾಗಿಲ್ಲ ಎಂದರೇ, ಅವರನ್ನೇ ಬದಲಾವಣೆ ಮಾಡುವ ಲಕ್ಷಣಗಳು ಕಂಡು ಬರುತ್ತಿವೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆ ಆಗುತ್ತದೆ ಎಂಬ ವದಂತಿಗಳು ಆಗಾಗ ಹೆಚ್ಚುತ್ತಿರುವಾಗಲೇ, ದೆಹಲಿಯಿಂದ ಖಾಲಿ ಕೈಯಲ್ಲಿ ಬಂದಿರುವ ಪ್ರಕರಣವೂ ಇದೀಗ ರಾಜಕೀಯ ಮೊಗಸಾಲೆಯಲ್ಲಿ ಬೇರೆಯದ್ದೇ ರೀತಿಯಲ್ಲಿ ಸದ್ದು ಮಾಡುತ್ತಿದೆ.