ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ
1 min read
ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು.
ಹುಬ್ಬಳ್ಳಿಯಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಬಿ.ಕೆ.ಹರಿಪ್ರಸಾದ, ಬೆಳಿಗ್ಗೆ ಧಾರವಾಡದಲ್ಲಿರುವ ವಿನಯ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿ, ಮನೆಯವರೊಂದಿಗೆ ಮಾತುಕತೆ ನಡೆಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಈ ಸಮಯದಲ್ಲಿ ಮಾತನಾಡಿದ ಹರಿಪ್ರಸಾದ, ವಿನಯ ಬಂಧನ ರಾಜಕೀಯ ಪ್ರೇರಿತ. ಸಿಬಿಐ ತನಿಖೆಯ ಅವಶ್ಯಕತೆ ಇಲ್ಲ ಎಂದು ಹೈಕೋರ್ಟ್ ಹೇಳಿತ್ತು. ಪೊಲೀಸರ ತನಿಖೆ ಅಂತಿಮ ಹಂತದಲ್ಲಿತ್ತು. ಆದರೆ, ರಾಜ್ಯ ಸರಕಾರ ತನಿಖೆಗೆ ಸಿಬಿಐ ಗೆ ನೀಡಿದೆ. ಇದೊಂದು ರಾಜಕೀಯ ಪ್ರೇರಿತ ಎಂದರು.
ಕೇಸುಗಳು ಕೋರ್ಟ್ ನಲ್ಲಿದ್ದಾಗ ಚರ್ಚೆ ಮಾಡೋದಿಲ್ಲ. ಅದು ನ್ಯಾಯಾಂಗ ನಿಂದನೆ ಆಗುತ್ತೆ. ಆದರೂ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹೀಗಾಗುತ್ತಿವೆ. ಬಿಜೆಪಿಯವರು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ವಿರೋಧಿಗಳ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ವಿನಯ ಕುಲಕರ್ಣಿ, ಬಿಜೆಪಿ ಸಂಸದ ಪ್ರಲ್ಹಾದ ಜೋಶಿ ವಿರುದ್ಧ ಸ್ಪರ್ಧೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ವಿನಯ ವಿರುದ್ಧ ಸಿಬಿಐ ಅಸ್ತ್ರ ಬಳಸಲಾಗಿದೆ. ಅದಕ್ಕೆ ಇಂಥ ಕೆಲಸ ಮಾಡಿಸುತ್ತಿದ್ದಾರೆ. ದ್ವೇಷ ಸಾಧನೆಗೋಸ್ಕರ ಇಂಥ ಕೆಲಸ. ಇವರೇನು ಐದು ನೂರು ವರ್ಷ ಬದುಕುತ್ತಾರಾ..?. ಬಿಜೆಪಿಯ ರಾಜಕೀಯ ಸಿದ್ಧಾಂತವೇ ಅಸೂಯೆ, ದ್ವೇಷ. ಇದನ್ನು ಸಾಧಿಸಲು ಇರೋದೇ ಬಿಜೆಪಿ. ಬಿಜೆಪಿಯವರು ದಮನ ನೀತಿ ಅನುಸರಿಸುತ್ತಿದ್ದಾರೆ. ಇದನ್ನು ರಾಜಕೀಯವಾಗಿ ಎದುರಿಸಲು ಸಹ ನಾವು ಸಿದ್ಧ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ವಿನಯ ಪರ ಇದೆ. ಈ ಘಟನೆ ವಿರುದ್ಧ ನಾವು ಹೋರಾಡುತ್ತೇವೆ. ಬಿಜೆಪಿ ಇಡಿ, ಸಿಬಿಐಗಳನ್ನ ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಅನ್ನೋದು ಗೊತ್ತಿದೆ ಎಂದು ಬಿ.ಕೆ.ಹರಿಪ್ರಸಾದ ಕಿಡಿಕಾರಿದರು.
ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ರಜತ ಉಳ್ಳಾಗಡ್ಡಿಮಠ, ರಾಜ್ಯ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಇಮ್ರಾನ ಕಳ್ಳಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.