ಅಬ್ಬರಸಿ ಬೊಬ್ಬಿರಿದವರೆಲ್ಲಾ ಒಂದಾದ್ರೂ: ನಡುವಿದ್ದರನ್ನ ‘ಅಗ್ಗ’ ಮಾಡಿದ್ರು..!
1 min read
ಕೊಪ್ಪಳ: ಇನ್ನೂ ಚುನಾವಣೆಯೇ ಆಗಿಲ್ಲ ಅದೇಗೆ ಅವರು ರಾಜ್ಯ ಮಂಡಳಿಗೆ ಬರ್ತಾರೆ, ಅವರನ್ನ ಸೋಲಿಸದೇ ನಾವೂ ಇರೋದೆ ಇಲ್ಲ. ಅವರ ಜೊತೆ ಹೊಂದಾಣಿಕೆ ಮಾಡೋದು ನಾವೂ ಸೋತ ಹಾಗೇನೆ. ಅವರ್ಯಾಕ್ರಿ ನಮ್ಮ ಸಂಘದಾಗ ಕೈ ಹಾಕ್ತಾರ್.. ಇತ್ಯಾದಿ ಇತ್ಯಾದಿ ಹೇಳುತ್ತಲೇ ಶಿಕ್ಷಕರಲ್ಲೇ ಬಣಗಳನ್ನ ಕ್ರಿಯೇಟ್ ಮಾಡಿದ ಮೇಧಾವಿಗಳು.. ಏನೂ ಆಗಿಯೇ ಇಲ್ಲವೆನ್ನುವಂತೆ ಮತ್ತೆ ಶಿಕ್ಷಕರ ಹೆಸರಿನಲ್ಲಿಯೇ ಒಂದಾಗಿದ್ದೇವೆ ಎಂದು ಕೈ ಕೈ ಕೂಡಿಸಿದ್ದು ಯಾವುದೇ ರಾಜಕಾರಣಿಗಳಲ್ಲ. ಬದಲಿಗೆ ಅಕ್ಷರ ಜ್ಞಾನ ಕೊಡುವ ಶಿಕ್ಷಕ ರಾಜಕಾರಣಿಗಳು..
ಹೌದು.. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಹಲವು ರೀತಿಯ ಪ್ರಚಾರಗಳು ನಡೆದವು. ಷಡಕ್ಷರಿಯವರು ತಮ್ಮದೇ ಬಣವನ್ನ ಸೃಷ್ಟಿಸಿಕೊಂಡರು. ಬಸವರಾಜ ಗುರಿಕಾರ ಅವರು ಮೊದಲಿಂದಲೂ ಶಿಕ್ಷಕ ಸಂಘದಲ್ಲಿದ್ದರು. ಅವರನ್ನ ಸೋಲಿಸಲು ಇವರೂ, ಇವರನ್ನ ಸೋಲಿಸಲು ಅವರೂ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ.
ಷಡಕ್ಷರಿ ಬಣಕ್ಕೆ ಇವರು, ಇವರ ಬಣಕ್ಕೆ ಅವರು ಸೆಡ್ಡು ಹೊಡೆಯುವ ರೀತಿಯಲ್ಲಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪರಿಸ್ಥಿತಿಯನ್ನ ನಿರ್ಮಾಣ ಮಾಡಿದರು. ಇದರಿಂದ ಹಲವು ಶಿಕ್ಷಕರ ಮನಸ್ಸುಗಳು ಒಡೆದವು. ಇದಾದ ಮೇಲೆ ರಾಜ್ಯ ಘಟಕವಾಗುವ ಸಮಯದಲ್ಲಿ ಏನೂ ಆಗಿಯೇ ಇಲ್ಲವೆನ್ನುವ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ಶಿಕ್ಷಕರ ಸಂಘದಲ್ಲಿನ ರಾಜಕೀಯ ಯಾವುದೇ ರಾಜಕೀಯ ಪಕ್ಷಗಳಿಗಿಂತ ಕಡಿಮೆ ಇರಲೇ ಇಲ್ಲ. ಪಕ್ಷಗಳು ಯಾವ ಥರ ಕಾರ್ಯಕರ್ತರನ್ನ ಮುಖಂಡರನ್ನ ದಾರಿ ತಪ್ಪಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೋ ಹಾಗೇಯೇ ಇಲ್ಲಿಯೂ ನೂರಾರೂ ಶಿಕ್ಷಕರನ್ನ ಗುದಮುರಗಿಗೆ ಕೆಡುವಿ ತಾವೂ ಹೊಂದಾಣಿಕೆ ಮಾಡಿಕೊಂಡಿದ್ದಾರೆ… ಗುರು ಬ್ರಹ್ಮ.. ಗುರು ವಿಷ್ಣು.. ಗುರು ದೇವೋ ಮಹೇಶ್ವರಾ.. ನೀನೇ ಕಾಪಾಡು..!