ಮತ್ತೆ 9 ಶಿಕ್ಷಕರಿಗೆ ಕೊರೋನಾ ಪಾಸಿಟಿವ್
1 min read
ಉತ್ತರಕನ್ನಡ/ಹಾಸನ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭಗೊಂಡಿರುವ ವಿದ್ಯಾಗಮ ಕಾರ್ಯಕ್ರಮ ನಿರಾಂತಕವಾಗಿ ನಡೆಯುತ್ತಿರುವ ಬೆನ್ನಲ್ಲೇ ಶಿಕ್ಷಕರಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿರುವುದು ಕಳವಳಕಾರಿಯಾದ ಘಟನೆಯಾಗಿದೆ.
ಗದಗ ಜಿಲ್ಲೆಯಲ್ಲಿನ ಖಾಸಗಿ ಹಾಗೂ ಸರಕಾರಿ ಶಾಲೆಯ ಹತ್ತು ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯ ಆರು ಹಾಗೂ ಹಾಸನ ಜಿಲ್ಲೆಯ ಮೂರು ಶಿಕ್ಷಕರಲ್ಲಿ ಕೊರೋನಾ ಪಾಸಿಟಿವ್ ಇರುವುದು ಪರೀಕ್ಷೆ ವೇಳೆಯಲ್ಲಿ ಗೊತ್ತಾಗಿದೆ.
ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ತರಗತಿಗಳು ಆರಂಭವಾಗುವ ಮುನ್ನ ನಡೆದ ಆರೋಗ್ಯ ಪರೀಕ್ಷೆಯಲ್ಲಿ ಮೂವರು ಶಿಕ್ಷಕರಿಗೆ ಕೋವಿಡ್-19 ದೃಢಪಟ್ಟಿದೆ. ಅಂಕೋಲಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನಲ್ಲಿ ತಲಾ ಒಬ್ಬರು ಶಿಕ್ಷಕರು ಸೋಂಕಿತರಾಗಿದ್ದಾರೆಂದು ಡಿಡಿಪಿಐ ಹರೀಶ ಗಾಂವ್ಕರ ಹೇಳಿದ್ದಾರೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ ಹುಲೇಕಲ್, ಮಂಜುವಳ್ಳಿ, ದಾಸನಕೊಪ್ಪ ಶಾಲೆಯ ತಲಾ ಒಬ್ಬರು ಶಿಕ್ಷಕರಲ್ಲಿ ಸೋಂಕು ಕಾಣಿಸಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ ಹೇಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಮೂವರು ಶಿಕ್ಷಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೋವಿಡ್-19 ದೃಢಪಟ್ಟ ಶಿಕ್ಷಕರು ಶಾಲೆಗೆ ಹಾಜರಾಗಿಲ್ಲ. ಹೀಗಾಗಿ ಪೋಷಕರು ಹಾಗೂ ಮಕ್ಕಳು ಆತಂಕಪಡುವ ಅಗತ್ಯವಿಲ್ಲ ಎಂದು ಹಾಸನ ಡಿಡಿಪಿಐ ಕೆ.ಎಸ್.ಪ್ರಕಾಶ ತಿಳಿಸಿದ್ದಾರೆ.