ಗರಗ ಪೊಲೀಸ್ ಠಾಣೆಯನ್ನ ತಿರುಪತಿ ಹುಂಡಿಯಂದಿದ್ದ ಪೇದೆ ಆತ್ಮಾನಂದ ಬೆಟಗೇರಿ ಸಸ್ಪೆಂಡ್
1 min read
ಧಾರವಾಡ: ಗ್ರಾಮೀಣ ಭಾಗದ ವೃತ್ತ ನಿರೀಕ್ಷಕ ಠಾಣೆಗೆ ಸಂಬಂಧಪಡುವ ಗರಗ ಪೊಲೀಸ್ ಠಾಣೆಯನ್ನ ತಿರುಪತಿ ಹುಂಡಿಯಂದೇ ಭಾವಿಸಿದ್ದ ಪೇದೆಯೋರ್ವ ಜೂಜಾಟದಲ್ಲಿ ತೊಡಗಿ ಪರಾರಿಯಾಗಿ ಅಮಾನತ್ತುಗೊಂಡಿದ್ದಾರೆ.
ಗರಗ ಠಾಣೆಯಲ್ಲಿ ಕ್ರೈಂ ಪೇದೆಯಾಗಿರುವ ಆತ್ಮಾನಂದ ಬೆಟಗೇರಿ ಎಂಬುವವನ ಜೊತೆಗೆ ಇನ್ನೂ ಮೂವರನ್ನ ಅಮಾನತ್ತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಆದೇಶ ಹೊರಡಿಸಿದ್ದಾರೆ.
ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಬಳಿ ಜೂಜಾಟದಲ್ಲಿ ತೊಡಗಿದ ಸಮಯದಲ್ಲಿ ಡಿವೈಎಸ್ಪಿ ರವಿ ನಾಯಕ ನೇತೃತ್ವದಲ್ಲಿ ದಾಳಿ ನಡೆದಿತ್ತು. ಇದರಲ್ಲಿ ಭಾಗಿಯಾಗಿದ್ದ 11 ಪೊಲೀಸರು ಪರಾರಿಯಾಗಿ ಗರಗ ಗ್ರಾಮದ ವ್ಯಕ್ತಿಯೋರ್ವರು ಬಂಧನವಾಗಿದ್ದರು.
ಅಮಾನತ್ತುಗೊಂಡಿರುವ ಪೇದೆ ಆತ್ಮಾನಂದ ಬೆಟಗೇರಿ, ಠಾಣೆಗೆ ಬಂದವರಿಗೆ ಕೆಲಸ ಮಾಡಿ ಕೊಡಬೇಕಾದರೇ, ‘ಗರಗ ಪೊಲೀಸ್ ಠಾಣೆ ತಿರುಪತಿ ಹುಂಡಿ ಇದ್ದಂಗ. ರೊಕ್ಕಾ ಹಾಕಬೇಕ್, ಸುಮ್ಮನ್ ಹೋಗಬೇಕ್’ ಎನ್ನುತ್ತಿದ್ದರಂತೆ. ಇದೇ ಮಾತು ಅವರಿಗೆ ತಿರುಗು ಬಾಣವಾಗಿದ್ದು, ಈಗ ಯಾವ ಹುಂಡಿಗೆ ಏನೂ ಹಾಕಿ ಅಮಾನತ್ತಿನಿಂದ ಪಾರಾಗುತ್ತಾರೋ ಕಾದು ನೋಡಬೇಕಿದೆ.